ಚಾಮರಾಜನಗರ: ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೊಡುಗೆ ನೀಡಬೇಕು ಎಂದು ಗ್ರಾೃವಿಟಿ ಸೈನ್ಸ್ ೌಂಡೇಶನ್ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎ.ಎಸ್.ಅಭಿಷೇಕ್ ಹೇಳಿದರು.
ಚಂದ್ರಯಾನ-3 ಮಿಷನ್‌ನ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈ ಮೇಲೆ ಇಳಿಸಲಾದ ಯಶಸ್ಸಿನ ಸ್ಮರಣಾರ್ಥ ತಾಲೂಕಿನ ಸಂತೇಮರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಮೊದಲ ವರ್ಷದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮದಲ್ಲಿ ‘ಭಾರತ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಇಸ್ರೋದ ಸಾಧನೆಗಳು’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಡಾ.ವಿಕ್ರಂ ಸಾರಾಬಾಯಿ ಅವರ ದೂರದೃಷ್ಟಿಯ ಫಲವಾಗಿ ಸ್ಥಾಪನೆಗೊಂಡ ಇಸ್ರೋ ಸಂಸ್ಥೆಯು ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಸಾಧನೆಯನ್ನು ಮಾಡಿದೆ. ಆರ್ಯಭಟದಿಂದ ಪ್ರಾರಂಭಿಸಿ ಇತ್ತೀಚೆಗೆ ಉಡಾವಣೆಗೊಂಡ ಆದಿತ್ಯ ಎಲ್1 ಮಿಷನ್‌ವರೆಗೂ ಅನೇಕ ಮಹತ್ತರ ಯೋಜನೆಗಳು ಯಶಸ್ವಿಯಾಗಿವೆ ಎಂದರು.
ಇಸ್ರೋ ಸಂಸ್ಥೆ 2023ರ ಆ.23ರಲ್ಲಿ ವಿಕ್ರಮ್ ಲ್ಯಾಂಡರ್‌ನ್ನು ಚಂದ್ರನ ಮೇಲ್ಮೈ ಮೇಲೆ ಯಶಸ್ವಿಯಾಗಿ ಇಳಿಸಿತ್ತು. ಚಂದ್ರಯಾನ-3 ಯೋಜನೆಯು ಭಾರತವು ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಹಾಗೂ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಎಂಬ ಹೆಗ್ಗಳಿಕೆ ಗಳಿಸಿತ್ತು. ಭವಿಷ್ಯದಲ್ಲಿ ಗಗನಯಾನಿಗಳನ್ನು ಅಂತರಿಕ್ಷಕ್ಕೆ ಕಳುಹಿಸುವ, ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಹಾಗೂ ಮಾನವನನ್ನು ಚಂದ್ರನಿಗೆ ಕಳುಹಿಸುವ ಮಹತ್ತರ ಯೋಜನೆಗಳನ್ನು ಇಸ್ರೋ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಗ್ರಾೃವಿಟಿ ಸೈನ್ಸ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಇಸ್ರೋ ಪ್ರಕಟಿಸಿದ ಪೋಸ್ಟರ್‌ಗಳು, ಸೆಟಲೈಟ್ ಮಾದರಿಗಳು, ಪುಸ್ತಕಗಳು, ಸೋಲಾರ್ ಪ್ರೊಜೆಕ್ಟರ್ ಗಳನ್ನೊಳಗೊಂಡಂತೆ ಕೆಲವು ವಿಜ್ಞಾನ ಮಾದರಿಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಲಾಯಿತು. ಸಂಸ್ಥೆಯ ನಿರ್ದೇಶಕ ಬಿ.ಮಹೇಶ್‌ಕುಮಾರ್, ಸೋಮರಾಜು, ನವೀನ್, ಶಾಲೆಯ ಉಪಪ್ರಾಂಶುಪಾಲ ಪುಷ್ಪರಾಜ್, ಶಿಕ್ಷಕ ಮಹದೇವ ಸ್ವಾಮಿ, ನಾಗೇಶ್, ಶಾಂತಮೂರ್ತಿ ಮಂಜುನಾಥಸ್ವಾಮಿ, ಶಿಕ್ಷಕಿ ಲಕ್ಷ್ಮೀ ಮಹೇಶ್ವರಿ ಭಾಗವಹಿಸಿದ್ದರು.