ಜಿಲ್ಲೆ

ಮೊಬೈಲ್ ತಲೆತಗ್ಗಿಸುವಂತೆ ಮಾಡುತ್ತೆ

ಚಾಮರಾಜನಗರ: ಮೊಬೈಲ್ ಫೋನ್ ವೀಕ್ಷಣೆ ತಲೆಬಾಗುವಂತೆ ಮಾಡಿದರೆ ಪುಸ್ತಕದ ಓದು ತಲೆ ಎತ್ತಿ ನಡೆಯುವ ವ್ಯಕ್ತಿತ್ವ ರೂಪಿಸುತ್ತದೆ ಎಂದು ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಹೇಳಿದರು.


ನಗರದ ಡಾ.ರಾಜಕುಮಾರ್ ರಂಗಮಂದಿರದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ರಂಗಗೀತೆಗಳ ಗಾಯನ, ಆಚಾರ ರಂಗ ಪ್ರಸ್ತುತಿ, ಗೌರವ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಅಕೌಂಟ್ ಹ್ಯಾಕ್ ಆಗುತ್ತದೆ. ಸೈಬರ್ ಕ್ರೈಂ ಹಣ ದೋಚುತ್ತದೆ. ಆದರೆ ಪುಸ್ತಕದ ಓದು ತಲೆ ಎತ್ತಿ ಬಾಳುವಂತೆ ಮಾಡುತ್ತದೆ. ಇತಿಹಾಸ ಅರಿಯಲು ನಾಟಕ, ಕಲೆ, ಸಂಸ್ಕೃತಿ ಸಹಕಾರ. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ರಂಗಭೂಮಿ ಪರಿಚಯ ಮಾಡಿಕೊಡಿ. ನನ್ನ ತಂದೆ ನನಗೆ ಸಂಗೀತ, ಕರಾಟೆ ತರಬೇತಿ ಕೊಡಿಸಿದರು. ಸಾಹಿತ್ಯಾಸಕ್ತಿ ಬೆಳೆಸಿದರು. ಎಲ್ಲ ರಂಗದ ಪರಿಚಯ ಇದ್ದರೆ ಪಠ್ಯದ ಹೊರತಾಗಿಯೂ ಜ್ಞಾನ ಬೆಳೆಯುತ್ತದೆ ಎಂದರು.


ಹಿರಿಯ ಸಾಹಿತಿ ಸೋಮಶೇಖರ ಬಿಸಲ್ವಾಡಿ ಮಾತನಾಡಿ, ರಂಗಾಯಣದ ಆಗಿನ ನಿರ್ದೇಶಕರಾಗಿದ್ದ ಬಿ.ವಿ.ಕಾರಂತರನ್ನು ಇಂದಿಗೂ ನೆನಪಿಸಿಕೊಳ್ಳಬೇಕು ಎಂದರು.
ರಂಗಭೂಮಿ ಒಂದು ಕಡೆ ಮೌಲ್ಯ, ಮಾನವೀಯತೆ ಕಟ್ಟುವಂತಹ ಕೆಲಸ ಮಾಡುತ್ತಿದ್ದರೆ, ನಮ್ಮನ್ನು ಆಳುವ ಸರ್ಕಾರಗಳು ರಂಗಭೂಮಿ ಹೆಸರು ಕುಗ್ಗಿಸುತ್ತಿವೆ ಎಂದರು.
ಇದೇ ವೇಳೆ ಬಿ.ವಿ.ಕಾರಂತ ಮತ್ತು ಶ್ರೀನಿವಾಸಭಟ್ ನೆನಪಿನಲ್ಲಿ ರಂಗ ಸಂಗೀತ ಶಿಬಿರದ ವಿದ್ಯಾರ್ಥಿಗಳಿಂದ ಮತ್ತು ಜಿಲ್ಲೆಯ ಗ್ರಾಮೀಣ ರಂಗಭೂಮಿ ನಾಟಕ ನಿರ್ದೇಶಕರಿಂದ ರಂಗ ಗೀತೆ ಗಾಯನ ನಡೆಯಿತು. ಆತ್ಮೀಯ ಸಂಗೀತ ಶಾಲೆಯ ಕೀಬೋರ್ಡ್ ವಿದ್ಯಾರ್ಥಿಗಳಿಂದ ಮ್ಯೂಸಿಕಲ್ ಕೀಬೋರ್ಡ್ ವಾದನ, ಪ್ರೊ.ಮಲೆಯೂರು ಗುರುಸ್ವಾಮಿ ಸ್ಮರಣಾರ್ಥವಾಗಿ ಆತ್ಮೀಯ ರಂಗ ಪ್ರಯೋಗಾಲಯ ಟ್ರಸ್ಟ್ ಕಲಾವಿದರಿಂದ ಆಚಾರ ರಂಗ ಪ್ರಸ್ತುತಪಡಿಸಲಾಯಿತು.


ರಂಗಕರ್ಮಿ ಗಣೇಶ್ ಅಮಿನಗಡ, ರಂಗ ನಿರ್ದೇಶಕ ಶಿವಶಂಕರ್ ಹೆಗ್ಗವಾಡಿ, ಮಹಾಲಿಂಗ ಗಿರ್ಗಿ, ಜಯಶೇಖರ್, ಶಿವಣ್ಣ ಮಂಗಲ, ನಾಗಣ್ಣ, ರಾಜಶೇಖರ್, ಪುರುಷೋತ್ತಮ್, ರಾಜೇಶ್, ಮಾದೇವಪ್ಪ ಕೊಡಗಾಪುರ, ಆತ್ಮೀಯ ರಂಗ ಪ್ರಯೋಗಾಲಯದ ಅಧ್ಯಕ್ಷ ಎಸ್.ಕೆ.ಕಿರಣ್‌ಕುಮಾರ್ ಇತರರು ಇದ್ದರು.