ಜಿಲ್ಲೆ

ಅಕ್ರಮ ಮದ್ಯ ಮಾರಾಟಗಾರರ ಬಂಧನ

ಕಿರಣ್ ಮಾದರಹಳ್ಳಿ

ಚಾಮರಾಜನಗರ : ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟವನ್ನು ಪರಿಣಾಮಕಾರಿಯಾಗಿ ತಡೆಯುವ ಸಲುವಾಗಿ, ಜಿಲ್ಲೆಯ ವಿವಿಧೆಡೆ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪಿಗಳನ್ನು ಶನಿವಾರ ಬಂಧಿಸಿ, ಮದ್ಯದ ಪೌಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬೇಗೂರು ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಚರಣ್‌ಗೌಡ ಬೇಗೂರು ಕಮರಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಂಡಿಗೆರೆ ಮಹದೇಶ್ವರ ಸ್ವಾಮಿ ದೇವಸ್ಥಾನ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ರಂಗನಾಥಪುರ ಗ್ರಾಮದ ಸೋಮಣ್ಣ ಎಂಬ ಆರೋಪಿಯಿಂದ 3,837 ರೂ. ಮೌಲ್ಯದ 90 ಎಂ.ಎಲ್ ನ 96 ಮದ್ಯದ ಪೌಚ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಹನೂರು ಪೊಲೀಸ್ ಠಾಣೆಯ ಪಿಎಸ್‌ಐ ಸಿ.ಮಂಜುನಾಥ ಪ್ರಸಾದ್ ಕಾರ್ಯಾಚರಣೆ ನಡೆಸಿ ಮಂಗಲ ಗ್ರಾಮದ ಸಂಪತ್‌ಕುಮಾರ್ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಹನೂರು ಪೊಲೀಸ್ ಠಾಣೆಯ ಪಿ.ಸಿ ಚಂದ್ರು ಮತ್ತು ರಾಮಕೃಷ್ಣ ಮಂಗಲ ಗ್ರಾಮದ ಮಾದೇಶ ಎಂಬುವವರನ್ನು ವಶಕ್ಕೆ ಪಡೆದು 1,040 ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಯಳಂದೂರು ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಹನುಮಂತ ಉಪ್ಪಾರ್ ಪಟ್ಟಣದ ನಾಡಮೇಗಲಮ್ಮನ ದೇವಸ್ಥಾನದ ಮುಂಭಾಗ ದೇವಸ್ಥಾನದ ಬಳಿ ಕಾರ್ಯಾಚರಣೆ ನಡೆಸಿ, ಆರೋಪಿ ಕೆ.ಎಂ.ಮಹೇಶ್ ಎಂಬುವವನನ್ನು ವಶಕ್ಕೆ ಪಡೆದಿದ್ದಾರೆ.

ಚಾ.ನಗರ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ರಿಹಾನಾ ಬೇಗಂ ಮರಿಯಾಲದಹುಂಡಿ ಗ್ರಾಮದ ಬಳಿ ದಾಳಿ ನಡೆಸಿ, ಆರೋಪಿ ಕಿರಣ್ ಕುಮಾರ್ ಎಂಬುವವನಿಂದ 1,279 ರೂ. ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ. ಅಗರ ಮಾಂಬಳ್ಳಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕ ಕರಿಬಸಪ್ಪ ಆಲಹಳ್ಳಿ ಗ್ರಾಮದ ರಂಗದಾಸಯ್ಯ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಆಯಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.