ಜಿಲ್ಲೆ

ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ

ಚಾಮರಾಜನಗರ: ಮಕ್ಕಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಹೇಳಿದರು.

ತಾಲೂಕಿನ ಹೊಂಡರಬಾಳು ನವೋದಯ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ, ಹೊಂಡರಬಾಳು ಜವಾಹರ್ ನವೋದಯ ಶಾಲೆಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಮಕ್ಕಳ ಹಬ್ಬ ಮತ್ತು ಬೇಟಿ ಪಡಾವೋ ಬೇಟಿ ಬಚಾವೋ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತಮ ಸಮಾಜ ಕಟ್ಟುವ ನಿಟ್ಟಿನಲ್ಲಿ ಮಕ್ಕಳನ್ನು ಮೌಲ್ಯಯುತ ಶಿಕ್ಷಣ ನೀಡಿ ಬೆಳೆಸಬೇಕಿದೆ. ತಾಯಂದಿರಿಗೆ ಮಕ್ಕಳಿಗಿಂತ ದೊಡ್ಡ ಆಸ್ತಿ ಬೇರೊಂದಿಲ್ಲ. ಹೀಗಾಗಿ ಪೋಷಕರು ಸದಾ ಮಕ್ಕಳನ್ನು ಪ್ರೀತಿ, ಗೌರವದಿಂದ ಕಾಣಬೇಕು. ಎಳೆವಯಸ್ಸಿನಲ್ಲೇ ಮಕ್ಕಳಿಗೆ ಉನ್ನತ ಹುದ್ದೆಗೆ ಏರುವಂತಹ ಕನಸುಗಳನ್ನು ರೂಪಿಸಬೇಕು. ವಿದ್ಯಾರ್ಥಿಗಳು ಟಿ.ವಿ, ಮೊಬೈಲ್‌ಗಳ ದಾಸರಾಗದೆ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಭ್ರೂಣ ಹತ್ಯೆ, ವರದಕ್ಷಿಣೆ, ಬಾಲ್ಯವಿವಾಹ, ಅತ್ಯಾಚಾರಗಳಿಂದ ಮಹಿಳೆಯರಿಗೆ ಇಂದಿನ ಆಧುನಿಕ ಯುಗದಲ್ಲೂ ಅಭದ್ರತೆ ಕಾಡುತ್ತಿದೆ. ಲೈಂಗಿಕ ದೌರ್ಜನ್ಯ ಶಿಕ್ಷಾರ್ಹ ಅಪರಾಧ ಎಂದು ತಿಳಿದಿದ್ದರೂ ಅಪರಾಧಗಳಾಗುತ್ತಿವೆ. ಜನರಿಗೆ ಶಿಕ್ಷೆಯ ತೀವ್ರತೆಯ ಬಗ್ಗೆ ಅರಿವು ಇಲ್ಲವೇ ಎಂಬ ಸಂದೇಹ ಮೂಡುತ್ತದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್ ಮಾತನಾಡಿ, ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನವು ಹೆಣ್ಣು ಮಗುವನ್ನು ರಕ್ಷಿಸುವ ಮತ್ತು ಹೆಣ್ಣುಮಕ್ಕಳ ಜನನ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹೆಣ್ಣು ಭ್ರೂಣಹತ್ಯೆ ತಡೆಯಬೇಕು, ಹೆಣ್ಣುಮಕ್ಕಳ ಮೇಲಿನ ಶೋಷಣೆಗೆ ಕಡಿವಾಣ ಹಾಕಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ ಎಂದರು.

ಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯರಾದ ಟಿ.ಜೆ. ಸುರೇಶ್ ಮಾತನಾಡಿ, ಎಲ್ಲಿಯವರೆಗೆ ಹೆಣ್ಣು ಭ್ರೂಣಹತ್ಯೆ ಮಹಾಪಾಪ ಎಂದು ತಾಯಿಯಂದಿರಲ್ಲಿ ಅರಿವು ಮೂಡುವುದಿಲ್ಲವೋ ಅಲ್ಲಿಯವರೆಗೆ ಲಿಂಗಾನುಪಾತದಲ್ಲಿ ಸುಧಾರಣೆ ಸಾಧ್ಯವಿಲ್ಲ. ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗಪತ್ತೆ ಮಾಡುವುದು ಹಾಗೂ ಹೆಣ್ಣುಭ್ರೂಣ ಹತ್ಯೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜವಾಹರ್ ನವೋದಯ ಶಾಲೆಯ ಪ್ರಾಂಶುಪಾಲ ಪ್ರೀತಾಜೇ, ಶಿಕ್ಷಣ ಇಲಾಖೆಯ ಅಧಿಕಾರಿ ಲಕ್ಷ್ಮೀಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ದಿನೇಶ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿದ್ದಶೆಟ್ಟಿ, ಕೃಷ್ಣಪ್ರಸಾದ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.