ಜಿಲ್ಲೆ

ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವಂತೆ ಮನವಿ

ಎ.ಎಸ್.ಮಣಿಕಂಠ

ಚಾಮರಾಜನಗರ: ವಯನಾಡಿನಲ್ಲಿ ನಡೆದ ಭೂಕುಸಿತ ದುರಂತದ ಹಿನ್ನೆಲೆಯಲ್ಲಿ ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯ ಪರಿಸರ ಸಂಘಟನೆ ಕಾರ್ಯಕರ್ತರು ಬುಧವಾರ ಮನವಿ ಸಲ್ಲಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಮಾಯಿಸಿದ ಕಾರ್ಯಕರ್ತರು, ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಬಳಿಕ ಅಪರ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪರಿಸರವಾದಿ ಪುಣಜನೂರು ದೊರೆಸ್ವಾಮಿ ಮಾತನಾಡಿ, ಜಿಲ್ಲೆ ಅತಿಹೆಚ್ಚು ಬೆಟ್ಟಗುಡ್ಡಗಳು ಮತ್ತು ಅರಣ್ಯ ಪ್ರದೇಶದಿಂದ ಕೂಡಿದೆ. ಯಾವ ಸಂದರ್ಭದಲ್ಲಿಯಾದರು ಅನಾಹುತ ನಡೆಯಬಹುದು. ಅದನ್ನು ತಡೆಯಲು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮುಂದಾಗಬೇಕು. ಅರಣ್ಯ ಪ್ರದೇಶಗಳ ಒತ್ತವರಿ, ಅಕ್ರಮಗಣಿಗಾರಿಕೆ, ಅಕ್ರಮ ರೆಸಾರ್ಟ್ ಮತ್ತು ಹೋಮ್‌ಸ್ಟೇ, ಹೋಟೆಲ್‌ಗಳ ನಿರ್ಮಾಣ, ರಸ್ತೆ ಅಗಲೀಕರಣಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಆಗ್ರಹಿಸಿದರು.

ಪಶ್ಚಿಮ ಘಟ್ಟಗಳ ಪ್ರಧಿಕಾರವನ್ನು ರಚಿಸಬೇಕು. ಸೂಕ್ಷ ಪರಿಸರ ವಲಯಗಳಲ್ಲಿ ಗಣಿಗಾರಿಕೆ, ಕಲ್ಲು ಗಣಿಗಾರಿಕೆ ಮತ್ತು ಮರಳು ಗಣಿಗಾರಿಕೆಗಳನ್ನು ನಿಷೇಧಿಸಬೇಕು. ಪರಿಸರ ಸ್ನೇಹಿ ಪ್ರವಾಸೋದ್ಯಮವಕ್ಕೆ ಮಾರ್ಗಸೂಚಿ ತಯಾರಿಸಬೇಕು ಎಂಬ ಹಲವು ಬೇಡಿಕೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪರಿಸರ ಸಂಘಟನೆಯ ಸದಸ್ಯರಾದ ರಂಗಕರ್ಮಿ ಕೆ.ವೆಂಕಟರಾಜು, ಗಿರಿಜನ ಸಂಘದ ಅಧ್ಯಕ್ಷ ಮುತ್ತಯ್ಯ, ಡಾ.ವೀರಭದ್ರನಾಯ್ಕ, ರಂಗಸ್ವಾಮಿ ನಾಯ್ಕ, ಸಿ.ಎಂ.ವೆಂಕಟೇಶ್, ಅಬ್ರಾಹಮ್ ಡಿ.ಸಿಲ್ವ, ರೈತ ಸಂಘದ ಕಾಡಳ್ಳಿ ಚಿನ್ನಸ್ವಾಮಿ, ಗಾ.್ರಪಂ ಸದಸ್ಯ ಚಂದ್ರು, ಹಾಗೂ ಇತರರು ಹಾಜರಿದ್ದರು.