ಚಾಮರಾಜನಗರ: ನಗರದ ರಾಮಸಮುದ್ರದಲ್ಲಿರುವ ಸಂತ ಫ್ರಾನ್ಸಿಸ್ ಐಸಿಎಸ್‌ಇ ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಿ 10 ಪದಕಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ.
ಬೆಂಗಳೂರಿನ ವಿದ್ಯಾನಗರದಲ್ಲಿ 14ವರ್ಷದೊಳಗೆ ಮತ್ತು 17 ವರ್ಷದೊಳಗಿನ ಮಕ್ಕಳಿಗೆ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸಂತ ಫ್ರಾನ್ಸಿಸ್ ಶಾಲೆಯ ಮಕ್ಕಳು 10 ಪದಕಗಳನ್ನು ಮುಡಿಗೇರಿಸಿಕೊಂಡು ಮೊದಲ ಬಾರಿಗೆ ದಾಖಲೆ ನಿರ್ಮಿಸಿದ್ದಾರೆ. 14 ವರ್ಷದೊಳಗಿನ ಮಕ್ಕಳ ವಿಭಾಗದಲ್ಲಿ ಸುದರ್ಶನ್ ಗುಂಡು ಎಸೆತದಲ್ಲಿ 2ನೇ ಸ್ಥಾನ ಪಡೆದು ತೆಗೆ ಡಿಸ್ಕಸ್ ಥ್ರೋ (ಚಕ್ರ ಎಸೆತ) ದಲ್ಲಿ ಮೊದಲನೇ ಸ್ಥಾನ ಪಡೆದಿದ್ದಾರೆ. ಸಂಪದ ಡಿಸ್ಕಸ್ ಥ್ರೋನಲ್ಲಿ 2ನೇ ಸ್ಥಾನ ಪಡೆದರೆ ಇನಾಮ್ ಗುಂಡು ಎಸೆತದಲ್ಲಿ ಮೊದಲನೇ ಸ್ಥಾನ ಪಡೆದಿದ್ದಾರೆ.
17 ವರ್ಷದೊಳಗಿನ ಮಕ್ಕಳಿಗೆ ನಡೆದ ಸ್ಪರ್ಧೆಯಲ್ಲಿ ಎಚ್.ಡಿ. ಭೂಮಿಕ ಗುಂಡು ಎಸೆತದಲ್ಲಿ ಮೊದಲನೇ ಸ್ಥಾನ ಹಾಗೂ ಚಕ್ರ ಎಸೆತದಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಕ್ರಿಸ್ಟಿ ಭರ್ಜಿ ಎಸೆತದಲ್ಲಿ 2ನೇ ಸ್ಥಾನ ಹಾಗೂ ತ್ರಿವಿಧ ಜಿಗಿತದಲ್ಲಿ 3ನೇ ಸ್ಥಾನ, ಆದರ್ಶ ತ್ರಿವಿಧ ಜಿಗಿತದಲ್ಲಿ 3ನೇ ಸ್ಥಾನ ಆಶೀಸ್ ಪಿ, ರಾಜ್ ಚಕ್ರ ಎಸೆತದಲ್ಲಿ 2ನೇ ಸ್ಥಾನ ಪಡೆಯುವ ಮೂಲಕ ಸೆ.25 ರಿಂದ 28 ರವರೆಗೆ ಹೈದರಾಬಾದ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದಲ್ಲಿ ನಡೆಯುವ ಕ್ರೀಡೆಯಲ್ಲಿ ಭಾಗವಹಿಸಲಿದ್ದಾರೆ.
ಈ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪದಕಗಳನ್ನು ತಂದುಕೊಡಲು ಮಕ್ಕಳಿಗೆ ಸತತ ತರಬೇತಿ ನೀಡಿದ ಕೋಚ್ ಶಿವು ಹಾಗೂ ಕ್ರೀಡಾಪಟುಗಳಿಗೆ ಸಂತ ಫ್ರಾನ್ಸಿಸ್ ಶಾಲೆಯ ಪ್ರಾಂಶುಪಾಲ ಬ್ರದರ್ ಪ್ರಭಾಕರ್ ಅಭಿನಂಧಿಸಿದ್ದಾರೆ.