ಜಿಲ್ಲೆ

ನಗರದಲ್ಲಿ ಭರ್ಜರಿ ಮಳೆ

ಎ.ಎಸ್.ಮಣಿಕಂಠ

ಚಾಮರಾಜನಗರ: ತಾಲೂಕಿನ ವಿವಿದೆಡೆ ಹಾಗೂ ನಗರದಲ್ಲಿ ಶನಿವಾರ ಭರ್ಜರಿ ಮಳೆಯಾಯಿತು. ನಗರದಲ್ಲಿ ಸುಮಾರು 4 ಗಂಟೆ ಸಮಯಕ್ಕೆ ಆರಂಭಗೊಂಡ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಎಡೆಬಿಡದೆ ಸುರಿಯಿತು.

ಬಳಿಕ ಸಂಜೆಯ ವೇಳೆಗೆ ಜಿಟಿ ಹಿಡಿಯಿತು. ನಗರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಚರಂಡಿಗಳು ಉಕ್ಕಿದ್ದರಿಂದ ರಸ್ತೆಯಲ್ಲಿ ನೀರು ಹರಿಯಿತು. ದೊಡ್ಡಂಗಡಿ, ಚಿಕ್ಕಂಗಡಿ ಬೀದಿ, ಡಿವಿಯೇಷನ್ ರಸ್ತೆ ಹಾಗೂ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಹೆಚ್ಚಿನ ನೀರು ಹರಿದು ಕೆಲಕಾಲ ವಾಹನ ಸವಾರರು ಸಮಸ್ಯೆ ಅನುಭವಿಸುವಂತಾಯಿತು. ಸಂಜೆಯ ಸಮಯದಲ್ಲಿ ವಿವಿಧ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಮಳೆಯಲ್ಲಿ ನೆನೆದುಕೊಂಡೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಬೀದಿ ಬದಿಯ ವ್ಯಾಪಾರಿಗಳು ಸಮಸ್ಯೆ ಅನುಭವಿಸುವಂತಾಯಿತು.

ತಾಲೂಕಿನ ಚಂದಕವಾಡಿ, ಆಲೂರು, ಕಾಗಲವಾಡಿ, ಕೂಡ್ಲೂರು. ನಾಗವಳ್ಳಿ ಹಾಗೂ ಇನ್ನಿತರೆ ಗ್ರಾಮಗಳಲ್ಲೂ ಸಂಜೆಯ ವೇಳೆಗೆ ಭರ್ಜರಿ ಮಳೆಯಾಯಿತು. ದಿಡೀರ್ ಸುರಿದ ಭರ್ಜರಿ ಮಳೆಯಿಂದಾಗಿ ಸಾಕಷ್ಟು ರಸ್ತೆಗಳಲ್ಲಿ ಮಳೆನೀರು ತುಂಬಿ ಹರಿಯಿತು.