ಜಿಲ್ಲೆ

ಪುರಾಣಿಪೋಡಿ ಜನರ ಸಮಸ್ಯೆಗಿಲ್ಲ ಮುಕ್ತಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಪುರಾಣಿಪೋಡಿನ ಸಮಸ್ಯೆಗಳಿಗೆ ಮುಕ್ತಿ ಸಿಗದ ಕಾರಣ ಅಲ್ಲಿನ ನಿವಾಸಿಗಳು ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪುತ್ತಿಲ್ಲ. ಇದು ಗಿರಿಜನರ ಅಂತರಾಳದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದರೂ ತಾಳ್ಮೆಯಿಂದ ಇರಬೇಕಾದ ಸ್ಥಿತಿ ಬಂದೊದಗಿದೆ.

ಯಳಂದೂರು ತಾಲೂಕಿನ ಪುರಾಣಿಪೋಡಿನ ಸಮಸ್ಯೆಗಳಿಗೆ ಮುಕ್ತಿ ಸಿಕ್ಕಿಲ್ಲ. ಜೀವನ ಬಡತನ ರೇಖೆಯಲ್ಲೇ ಉಳಿದು ಬಿಟ್ಟಿದೆ. ಆಧುನಿಕ ಯುಗ ಕಾಡು ಜನರನ್ನು ಇಲ್ಲೇ ಬಿಟ್ಟು ಮುಂದೆ ಸಾಗುತ್ತಿದೆ. ಸರ್ಕಾರ ನೀಡುವ ಪಡಿತರ ಮತ್ತು ಇನ್ನಿತರ ಸೌಲಭ್ಯಗಳನ್ನಷ್ಟೇ ನಂಬಿ ಬದುಕಬೇಕಾದ ಸ್ಥಿತಿ ಇದೆ. ಇವುಗಳ ಮಧ್ಯೆ ಇರುವ ಕೆಲಸ, ಕಾರ್ಯಗಳನ್ನು ಬಿಟ್ಟು ತಾವು ವಾಸ ಮಾಡುವ ಕಡೆಗಳಲ್ಲಿ ಮೂಲಸೌಕರ್ಯ ಕಲ್ಪಿಸಿಕೊಡಿ ಎಂದು ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪುತ್ತಿಲ್ಲ. ಪುರಾಣಿ ಪೋಡುವಿನಲ್ಲಿ 108 ಆದಿವಾಸಿ ಕುಟುಂಬಗಳು ವಾಸಿಸುತ್ತಿದ್ದು ಗ್ರಾಮಕ್ಕೆ ಬರುವ ರಾಜಕಾರಣಿಗಳು, ಅಧಿಕಾರಿಗಳು ಕೊಟ್ಟ ಭರವಸೆಯ ಬೆನ್ನು ಹತ್ತಿ ಬರುವುದು ನಿಲ್ಲುತ್ತಿಲ್ಲ.

ಜು.10ರಂದು ಬಿಳಿಗಿರಿರಂಗನ ಬೆಟ್ಟದ ತಪ್ಪಲಿನಲ್ಲಿ ಸೋಲಿಗರು ವಾಸಿಸುವ ಪುರಾಣಿಪೋಡಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿದ್ದರು. ಇಲ್ಲಿನ ಮೂಲಸೌಲಭ್ಯಗಳ ಬಗ್ಗೆ ಆದಿವಾಸಿಗಳಿಂದ ಸಮಸ್ಯೆ, ಕುಂದುಕೊರತೆ, ಅಹವಾಲುಗಳನ್ನು ಆಲಿಸಿದ್ದರು. ವಾಸಿಸಲು ಮನೆ, ಸಮರ್ಪಕ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಲಭ್ಯಗಳಿಲ್ಲದೆ ಸಂಕಷ್ಟದ ಸ್ಥಿತಿ ಎದುರಾಗಿರುವುದನ್ನು ಕೇಳಿ ಮರುಕ ವ್ಯಕ್ತಪಡಿಸಿದ್ದರು. ಆದಿವಾಸಿಗಳ ಸಮಸ್ಯೆ ಇತ್ಯರ್ಥಕ್ಕೆ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಜನರ ಸಂಕಷ್ಟಗಳನ್ನು ಪರಿಹರಿಸಲು ಆದ್ಯತೆ ನೀಡಬೇಕು ಎಂದಿದ್ದರು.

ಇದು ಗ್ರಾಮಸ್ಥರಲ್ಲಿ ಕಳೆದು ಹೋಗಿದ್ದ ಆಶಾಭಾವವನ್ನು ಮತ್ತೆ ಮೂಡಿಸಿ ಸೌಲಭ್ಯಗಳು ಸಿಗಬಹುದೆಂಬ ಆಸೆಗೆ ಮರುಜನ್ಮ ನೀಡಿತ್ತು. ದಿನ ಕಳೆಯುತ್ತಿದ್ದಂತೆ ಬದಲಾವಣೆಗಳು ಕಾಣದ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳನ್ನು ಬಿಟ್ಟು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರನ್ನು ಕೆಲವು ದಿನಗಳ ಹಿಂದೆ ಭೇಟಿ ಮಾಡಿದ ಗಿರಿಜನರು ತಮ್ಮೂರಿನಲ್ಲಿ ಮೂಲಸೌಕರ್ಯ ಕಲ್ಪಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಗಿರಿಜನರು ಸಲ್ಲಿಸಿರುವ ಮನವಿ ಪತ್ರಗಳು ಇದೇ ಮೊದಲನೆಯದಲ್ಲ. ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಿ ರಸ್ತೆ, ನೀರು, ವಿದ್ಯುತ್ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ. ವಿಧಾನಸಭೆ, ಲೋಕಸಭೆ ಚುನಾವಣೆಗಳು ಬಂದಾಗ ಮತದಾನ ಬಹಿಷ್ಕಾರ ಹಾಕುವುದಾಗಿ ಪ್ರತಿಭಟನೆಗಳನ್ನೂ ಮಾಡಿದ್ದಾರೆ. ಆಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಮನವೊಲಿಸಿ ಪ್ರತಿಭಟನೆ ಕೈಬಿಡಿಸಿದ್ದಾರೆ. ಬಳಿಕ ಮೂಲಸೌಕರ್ಯಗಳು ದೊರೆಯದೆ ಮತ್ತೆ ಸರ್ಕಾರಿ ಕಚೇರಿಗಳಲ್ಲಿ ಮನವಿ ಸಲ್ಲಿಸಲು ಅಲೆಯುವುದು ತಪ್ಪುತ್ತಿಲ್ಲ. ಹೀಗೆ ಹಲವು ವರ್ಷಗಳಿಂದ ಗಿರಿಜನರ ತಾಳ್ಮೆಯನ್ನು ಪರೀಕ್ಷಿಸುವಂತಾಗಿದೆ.

ತಾಳ್ಮೆ ಕಳೆದುಕೊಂಡವರು ಮಾಡಿದ್ದೇನು?
ಕಾಡುಜನರು ತಾಳ್ಮೆ ಕಳೆದುಕೊಂಡರೆ ಏನು ಮಾಡುತ್ತಾರೆ ಎನ್ನುವುದಕ್ಕೆ ‘ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ’ ಸಾಕ್ಷಿ. ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಹಲವು ವರ್ಷಗಳಿಂದ ಶಾಂತಿಯುತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರ ಮಾಡುವುದಾಗಿ ೋಷಿಸಿದ್ದರು. ಮತದಾನದ ದಿನ ಇಂಡಿಗನತ್ತ ಮತಗಟ್ಟೆ ವ್ಯಾಪ್ತಿಯ ಮೆಂದಾರೆ ಗ್ರಾಮಸ್ಥರು ಮತ ಹಾಕಲು ಬಂದಾಗ ಗಲಭೆ ಸೃಷ್ಟಿಯಾಗಿ ಕಲ್ಲು ತೂರಾಟ ನಡೆದಿತ್ತು. ಗ್ರಾಮಸ್ಥರು ಮತಗಟ್ಟೆ ಧ್ವಂಸ ಮಾಡಿದ್ದರು. ಈ ಪ್ರಕರಣದಲ್ಲಿ ಹಲವು ಆರೋಪಿಗಳು ಬಂಧನಕ್ಕೊಳಗಾಗಿ ಬಿಡುಗಡೆಯಾದರು. ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಲಭ್ಯಕ್ಕಾಗಿ ನಡೆದ ಹೋರಾಟ ಉಗ್ರರೂಪ ಪಡೆದುಕೊಂಡಿತು. ದೇಶದ ಚುನಾವಣೆಗಳಲ್ಲಿ ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ ಕಪ್ಪುಚುಕ್ಕಿಯಾಗಿ ಉಳಿದುಬಿಟ್ಟಿತು.

ಅಧಿಕಾರಿಗಳಿಂದ ವಾಸ್ತವ್ಯ ಸಾಧ್ಯವೇ?
ಜಿಲ್ಲೆಯಲ್ಲಿ ಮೂಲಸೌಕರ್ಯಗಳಿಲ್ಲದ ಹಾಡಿ, ಪೋಡುಗಳಲ್ಲಿ ಅಧಿಕಾರಿಗಳ ವಾಸ್ತವ್ಯ ಹೂಡಿ ಸಮಸ್ಯೆ ಅರ್ಥ ಮಾಡಿಕೊಂಡು ಪರಿಹಾರ ಒದಗಿಸುವ ಕಾರ್ಯ ನಡೆಯುತ್ತಿಲ್ಲ. ಅಧಿಕಾರಿಗಳ ಗ್ರಾಮ ವಾಸ್ತವ್ಯದ ಪರಿಕಲ್ಪನೆ ಗಿರಿಜನರ ಊರುಗಳನ್ನು ತಲುಪುತ್ತಿಲ್ಲ. ಮೂಲಸೌಕರ್ಯ ಕಲ್ಪಿಸಲು ಅರಣ್ಯ ಇಲಾಖೆ ಕಾನೂನು ಅಡ್ಡಿ ಎಂದು ಹೇಳುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅರಣ್ಯ ಇಲಾಖೆ ಅಧಿಕಾರಿಗಳು ವನ್ಯಪ್ರಾಣಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿರುವವರಂತೆ ಕಾಣುತ್ತಿದೆ. ಕಾಡಿನೊಳಗಿರುವ ಜನರ ಅಭಿವೃದ್ಧಿಯ ಜವಾಬ್ದಾರಿಯನ್ನು ಮರೆಯದೆ ಗ್ರಾಮಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಕಾನೂನಾತ್ಮಕವಾಗಿ ನೆರವು ಒದಗಿಸಿಕೊಡಬೇಕಾಗಿದೆ.

ಪುರಾಣಿಪೋಡಿನಲ್ಲಿ ವಿದ್ಯುತ್ ಸೌಲಭ್ಯವಿಲ್ಲ. ಸೋಲಾರ್ ಕೆಟ್ಟು ಹೋಗಿದೆ. ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಆಶ್ರಯಿಸಿದ್ದೇವೆ. ರಸ್ತೆಯಂತೂ ಸಂಪೂರ್ಣ ಹಾಳಾಗಿದೆ. ನಾವು ಬೇಕಾದಷ್ಟು ಅಧಿಕಾರಿಗಳನ್ನು ಕೇಳಿಕೊಂಡರೂ ಸಮಸ್ಯೆ ಬಗೆಹರಿದಿಲ್ಲ. ನಮ್ಮಿಂದ ಮನವಿ ಪಡೆದವರೆಲ್ಲ ಭರವಸೆ ಕೊಟ್ಟರು. ಆದರೆ ಕೆಲಸ ಮಾತ್ರ ಮಾಡಲಿಲ್ಲ.ಮುತ್ತೇಗೌಡ, ಪುರಾಣಿಪೋಡು, ಯಳಂದೂರು
ಪುರಾಣಿಪೋಡು ಅರಣ್ಯದೊಳಗೆ ಇರುವುದರಿಂದ ಅನುಮತಿ ಸಿಗದೆ ತೊಡಕುಂಟಾಗಿದೆ. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ನಿರ್ದೇಶನದ ಮೇರೆಗೆ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಲು ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದಕ್ಕೆ ಅರಣ್ಯ ಇಲಾಖೆಯಿಂದ ಅನುಮತಿ ಸಿಗಬೇಕು.ಜಯಪ್ರಕಾಶ್, ತಹಸೀಲ್ದಾರ್ ಯಳಂದೂರು
ಮೂಲಸೌಕರ್ಯ ಕಲ್ಪಿಸಲು ಇತ್ತೀಚೆಗೆ ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಹಾಕಿರಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯವೇ ಮನವಿ ಸಲ್ಲಿಕೆಯಾಗಬೇಕು. ಮೂಲಸೌಕರ್ಯ ಕಲ್ಪಿಸಲು ಅನುಮತಿ ನೀಡುವುದು ಕೇಂದ್ರ ಕಚೇರಿಯ ನಿರ್ಧಾರವಾಗಿರುತ್ತದೆ.ನಾಗೇಂದ್ರನಾಯಕ, ಆರ್‌ಎ್ಒ, ಯಳಂದೂರು ವಲಯ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ