ಚಾಮರಾಜನಗರ: ಪ್ರಾಮಾಣಿಕ ರಾಜಕಾರಣಕ್ಕೆ ಹೆಸರುವಾಸಿಯಾಗಿದ್ದ ಮಾಜಿ ರಾಜ್ಯಪಾಲ ದಿ.ಬಿ.ರಾಚಯ್ಯ ಅವರ ಸ್ಮಾರಕ ಹಲವು ವಿಶೇಷತೆಗಳಿಂದ ಕೂಡಿದ್ದು, ಅವರ ಸಂಪೂರ್ಣ ಜೀವನ ಚರಿತ್ರೆ ಸ್ಮಾರಕದೊಳಗೆ ಮೂಡಿಬಂದಿದೆ.
ತಾಲೂಕಿನ ಆಲೂರು ಗ್ರಾಮದ ಬಿ.ರಾಚಯ್ಯ ಚಿರಶಾಂತಿ ಧಾಮದಲ್ಲಿ ಸುಮಾರು 1 ಎಕರೆ 14 ಗುಂಟೆ ಜಾಗದಲ್ಲಿ ನಿರ್ಮಾಣವಾಗಿರುವ ಸ್ಮಾರಕ ನೆಲ ಮಹಡಿ ಹಾಗೂ ಮೊದಲ ಮಹಡಿ ಒಳಗೊಂಡಂತೆ 6400 ಚದರ ಅಡಿ ವಿಸ್ತೀರ್ಣದಲ್ಲಿದೆ. ಕಮಲದ ರೂಪದಲ್ಲಿರುವ ಸ್ಮಾರಕವನ್ನು ಸಂಪೂರ್ಣವಾಗಿ ರಾಜಸ್ಥಾನದಿಂದ ತರಿಸಿರುವ ಮಾರ್ಬಲ್‌ನಿಂದ ನಿರ್ಮಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಾಣ ಮಾಡಿರುವ ಸ್ಮಾರಕಕ್ಕೆ ಅಂದಾಜು 5 ಕೋಟಿ ರೂ.ವೆಚ್ಚ ಮಾಡಲಾಗಿದೆ. ಮೊದಲ ಹಂತದಲ್ಲಿ ಸ್ಮಾರಕ ಭವನ ಹಾಗೂ ಸುತ್ತಲೂ ಆಕರ್ಷಕವಾಗಿ ಕಾಂಪೌಂಡ್ ನಿರ್ಮಾಣಗೊಂಡಿದೆ. ಸ್ಮಾರಕದ ಬಳಿ ಇನ್ನು ಹಲವಾರು ಕಾಮಗಾರಿ ನಡೆಯಬೇಕಿದೆ.
ಗಮನ ಸೆಳೆಯುತ್ತಿರುವ ಛಾಯಾಚಿತ್ರ:
ಬಿ.ರಾಚಯ್ಯ ಅವರ ಜೀವನ ಚರಿತ್ರೆ ಬಿಂಬಿಸುವ 120ಕ್ಕೂ ಹೆಚ್ಚು ಛಾಯಾಚಿತ್ರಗಳ ಗ್ಯಾಲರಿ ಗಮನ ಸೆಳೆಯುತ್ತಿವೆ. ನೆಲ ಮಹಡಿ ಮತ್ತು ಮೊದಲ ಮಹಡಿಯ ಸುತ್ತಲಿನ ಗೋಡೆಯಲ್ಲೂ ಬಹಳ ಆಕರ್ಷಕವಾಗಿ ಜೋಡಿಸಲಾಗಿದೆ. ಬಿ.ರಾಚಯ್ಯ ಅವರ ಆಲೂರಿನ ಹಳೆಯ ನಿವಾಸ, ಅವರ ತಂದೆ-ತಾಯಿ, ಬಾಲ್ಯದ ದಿನಗಳು, ವಿದ್ಯಾಭ್ಯಾಸ, ರಾಜಕೀಯ ಒಡನಾಟದ ಚಿತ್ರಗಳು, ಶಾಸಕರಾಗಿ, ಸಚಿವರಾಗಿ ಹಾಗೂ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ಸಂದರ್ಭದ ಛಾಯಾಚಿತ್ರಗಳು, ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು, ವಿವಿಧ ಇಲಾಖೆಗಳ ಸಚಿವರಾಗಿ ತೆಗೆದುಕೊಂಡ ಮಹತ್ವದ ನಿರ್ಧಾರಗಳು, ವಿದೇಶಗಳಿಗೆ ಭೇಟಿ ನೀಡಿರುವ ಸಂದರ್ಭದ ಚಿತ್ರಗಳು ಹಾಗೂ ದೇಶದ ಪ್ರಮುಖ ರಾಜಕೀಯ ನಾಯಕರೊಂದಿಗಿನ ಚಿತ್ರಗಳನ್ನು ಪ್ರದರ್ಶಿಸಲಾಗಿದೆ. ಎಲ್ಲ ಛಾಯಾಚಿತ್ರಗಳ ತಳದಲ್ಲಿ ಛಾಯಾಚಿತ್ರಗಳ ಕುರಿತು ಸಮರ್ಪಕವಾದ ಮಾಹಿತಿಯನ್ನು ಒದಗಿಸಲಾಗಿದೆ.
ಕವಿಶೈಲವೇ ಪ್ರೇರಣೆ:
ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಸ್ಮಾರಕ ನಿರ್ಮಾಣಕ್ಕೆ ತೀರ್ಥಹಳ್ಳಿಯ ಕವಿಶೈಲದಲ್ಲಿರುವ ಕುವೆಂಪು ಅವರ ಕವಿಶೈಲದ ಮಾದರಿ ಪ್ರೇರಣೆಯಾಗಿದೆ ಎಂದು ಹೇಳಲಾಗುತ್ತಿದೆ. ಅದರಂತೆ ಛಾಯಾಚಿತ್ರಗಳ ಪ್ರದರ್ಶನ ಮಾತ್ರವಲ್ಲದೇ ಸ್ಮಾರಕದ ಮೊದಲ ಮಹಡಿಯಲ್ಲಿ ಬಿ.ರಾಚಯ್ಯ ಅವರು ಉಪಯೋಗಿಸುತ್ತಿದ್ದ ಕೋಟ್, ವಾಚ್, ಟೋಪಿ, ವಾಕಿಂಗ್ ಸ್ಟಿಕ್, ವಿಸಿಟಿಂಗ್ ಕಾರ್ಡ್ ಹಾಗೂ ಸಾರ್ವಜನಿಕ ಜೀವನದಲ್ಲಿ ದೊರೆತ ಅಪರೂಪದ ಸ್ಮರಣಿಕೆಗಳು, ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸ್ಮಾರಕದ ಮಧ್ಯಭಾಗದಲ್ಲಿ ಈಗಾಗಲೇ ನಿರ್ಮಾಣವಾಗಿರುವ ಸಮಾಧಿಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಸ್ಮಾರಕದ ನೆಲ ಮಹಡಿ ಹಾಗೂ ಮೊದಲ ಮಹಡಿಯಲ್ಲೂ ಸೂಕ್ತವಾದ ಬೆಳಕು ಹರಿಯುವಂತೆ ಸುತ್ತಲೂ ಆಕರ್ಷಕವಾದ ಕಿಟಕಿಗಳನ್ನು ಅಳವಡಿಸಲಾಗಿದೆ. ಒಟ್ಟಾರೆಯಾಗಿ ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಜೀವನ ಚರಿತ್ರೆಯನ್ನು ಸುಲಭವಾಗಿ ಅರಿತುಕೊಳ್ಳಲು ಸ್ಮಾರಕ ನೆರವಾಗಲಿದೆ.