ಜಿಲ್ಲೆ

ಬಿಜೆಪಿ-ಜೆಡಿಎಸ್‌ಗೆ ಪಾದಯಾತ್ರೆ ಬೇಕಿತ್ತಾ?

ಎ.ಎಸ್.ಮಣಿಕಂಠ

ಚಾಮರಾಜನಗರ: ಹಗರಣಗಳೇ ಹಾಸುಹೊಕ್ಕಾಗಿರುವ ಬಿಜೆಪಿ-ಜೆಡಿಎಸ್‌ಗೆ ಪಾದಯಾತ್ರೆ ಬೇಕಿತ್ತಾ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಲತಾ ರಾಜಶೇಖರಜತ್ತಿ ಪ್ರಶ್ನಿಸಿದರು.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರ ಪತ್ನಿ ಹೆಸರಿಗೆ ಸೈಟ್ ಕೊಟ್ಟರು. ಆಗ ಇವರಿಗೆ ಇದು ಕಾನೂನುಬಾಹಿರ ಎಂಬ ಜ್ಞಾನ ಇರಲಿಲ್ಲವೇ?, ಹಾಗಿದ್ದ ಮೇಲೆ ಇವರು ಯಾಕೆ ಕೊಟ್ಟರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿ ಸರ್ಕಾರ ಇದ್ದಾಗ ನೌಕರರ ಸಂಬಳದಲ್ಲೂ ಪರ್ಸಂಟೇಜ್ ತೆಗೆದುಕೊಂಡಿತು. ಆರ್.ಅಶೋಕ್ ಭೂ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಕರೊನಾ ಸಂದರ್ಭದಲ್ಲಿ ಶವ ಸಂಸ್ಕಾರದಲ್ಲೂ ಲೂಟಿ ಮಾಡಿದರು. ಮೊಟ್ಟೆ ಹಗರಣ ಸದ್ದು ಮಾಡಿತು. ಇನ್ನು ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಕುಟುಂಬ ಎಷ್ಟೊಂದು ಭೂಕಬಳಿಕೆ ಮಾಡಿದೆ. ಹೀಗಿರುವಾಗ ಇವರೆಲ್ಲರೂ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ಮಾಡುತ್ತಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದರು.

ರಾಜ್ಯದಲ್ಲಿ ಜೋರು ಮಳೆ ಸುರಿದು ಜನರು ಜೀವಗಳನ್ನೇ ಕಳೆದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಪಾದಯಾತ್ರೆ ಬೇಕಿತ್ತಾ?. ಇವರದೇ ಹಗರಣಗಳು ಇರುವಾಗ ಕ್ಷುಲ್ಲಕ ಕಾರಣ ಇಟ್ಟುಕೊಂಡು ಪಾದಯಾತ್ರೆ ಮಾಡುತ್ತಿರುವುದು ಸರಿಯಲ್ಲ. ಒಬ್ಬ ವ್ಯಕ್ತಿಯನ್ನು ಅಧಿಕಾರದಿಂದ ಕೆಳಗೆ ಇಳಿಸಬೇಕೆಂದು ಈ ರೀತಿ ಮಾಡಬಾರದು. ಬಿಜೆಪಿ ಹಗರಣಗಳ ತನಿಖೆಯಾಗಬೇಕು. ಸಿದ್ದರಾಮಯ್ಯ ಜಾತಿಬೇಧ, ಪಕ್ಷಬೇಧವಿಲ್ಲದೆ ಎಲ್ಲರಿಗೂ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ನಗರಸಭೆ ಸದಸ್ಯೆ ಚಿನ್ನಮ್ಮ, ವಿವಿಧ ತಾಲೂಕುಗಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆಯರಾದ ಭಾಗ್ಯ, ನಾಗಶ್ರೀ, ಸುವರ್ಣ ಇದ್ದರು.