ಜಿಲ್ಲೆ

ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಆಗಾಗ್ಗೆ ಕ್ರೀಡೆಯಲ್ಲಿ ಭಾಗವಹಿಸುವುದು ಸೂಕ್ತ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸಲಹೆ ನೀಡಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಬೆಳ್ಳಿ ಮಹೋತ್ಸವ ಸಂಭ್ರಮದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಚಟುವಟಿಕೆಯಿಂದ ಕೂಡಿದೆ. ದಿನನಿತ್ಯದ ಒತ್ತಡಗಳಲ್ಲೇ ಮುಳುಗಿರುವವರಿಗೆ ಕ್ರೀಡೆ ಅತ್ಯವಶ್ಯಕ. ರಾಜಕಾರಣಿಗಳು ಜನಸೇವೆಯಲ್ಲಿ ತೊಡಗಿದ್ದರೆ, ಪತ್ರಕರ್ತರು ಸುದ್ದಿ ಮಾಡುವುದರಲ್ಲಿ ದಿನಕಳೆಯುತ್ತಾರೆ. ನ್ಯಾಯಾಧೀಶರು, ವಕೀಲರು ತಮ್ಮ ಕಾರ್ಯದಲ್ಲಿ ನಿರತರಾಗಿರುತ್ತಾರೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಚ್ಚರ ತಪ್ಪದಂತೆ ಪತ್ರಿಕಾರಂಗ ನೋಡಿಕೊಳ್ಳುತ್ತಿದೆ ಎಂದರು.

ಮನುಷ್ಯನಿಗೆ ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆ ಮುಖ್ಯ. ನಾನು ವಿದ್ಯಾರ್ಥಿಯಾಗಿದ್ದಾಗ ಕ್ರೀಡಾಪಟುವಾಗಿದ್ದೆ. ಹಾಗಾಗಿ ನನಗೆ ಕ್ರೀಡೆ ಎಂದರೆ ಬಲು ಆಸಕ್ತಿ. ಜಿಲ್ಲೆಯ ಅಭಿವೃದ್ಧಿ ಕುಂಟುತ್ತಾ ಸಾಗಿದೆ. ಸಂತೇಮರಹಳ್ಳಿಯಲ್ಲಿ ನಾನು ಶಾಸಕನಾಗಿದ್ದಾಗ ಕ್ರೀಡಾಂಗಣಕ್ಕಾಗಿ ಜಾಗ ಕೊಟ್ಟಿದ್ದೆ. ಆ ಸ್ಥಳದಲ್ಲಿ ಏಕಲವ್ಯ ಕ್ರೀಡಾ ಶಾಲೆ ಸ್ಥಾಪನೆಯಾಯಿತು ಎಂದು ಹೇಳಿದರು.

ಹನೂರು ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಕ್ರೀಡೆ ಖುಷಿ ಕೊಡುವ ಚಟುವಟಿಕೆ. ನನಗೂ ಕ್ರೀಡಾಸಕ್ತಿ ಇದೆ. ಆದರೆ ಸಮಯವಿಲ್ಲ. ಪತ್ರಕರ್ತರ ಮಕ್ಕಳನ್ನು ಉತ್ತಮ ಕ್ರೀಡಾಪಟುಗಳನ್ನಾಗಿ ಮಾಡಿ. ದಿನನಿತ್ಯ ಕೆಲಸಗಳ ಒತ್ತಡದಲ್ಲೇ ಇರುವ ಪತ್ರಕರ್ತರು ಕ್ರೀಡಾಕೂಟಕ್ಕೂ ಸಮಯ ಮೀಸಲು ಇಟ್ಟಿರುವುದು ಖುಷಿಯ ವಿಚಾರ. ಇದೇ ರೀತಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತೊಡಗಿಕೊಳ್ಳಿ ಎಂದು ಸಲಹೆ ನೀಡಿದರು.

ನಗರಸಭೆ ಪೌರಾಯುಕ್ತ ರಾಮದಾಸ್ ಮಾತನಾಡಿ, ಎಲ್ಲಿ, ಏನು ನಡೆಯುತ್ತಿದೆ ಎಂದು ಜನರಿಗೆ ತಿಳಿಸಿಕೊಡುತ್ತಿರುವಲ್ಲಿ ಪತ್ರಕರ್ತ ಪಾತ್ರ ಮಹತ್ವದ್ದು. ಕ್ರೀಡಾಕೂಟ ಮುಗಿದ ಮೇಲೂ ಕೆಲಸ ಮಾಡುತ್ತಾರೆ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಮಾತನಾಡಿ, ಪತ್ರಕರ್ತರೂ ಸಹ ಪೊಲೀಸರಂತೆ ಬಿಡುವಿಲ್ಲದಂತೆ ಕರ್ತವ್ಯ ನಿರ್ವಹಿಸುತ್ತಾರೆ. ಜಿಲ್ಲೆಯಲ್ಲಿ ಪೊಲೀಸ್ ಮತ್ತು ಪತ್ರಕರ್ತರು ಸೌಹಾರ್ದಯುತವಾಗಿ ಕೆಲಸ ಮಾಡೋಣ ಎಂದು ಹೇಳಿದರು.

ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಮಾತನಾಡಿದರು. ಪತ್ರಕರ್ತರು ಮತ್ತು ಕುಟುಂಬದವರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ತೀರ್ಪುಗಾರರಾಗಿ ಶ್ರೀನಿವಾಸ ಪ್ರಸಾದ್, ನಾಗೇಂದ್ರ ಕಾರ್ಯ ನಿರ್ವಹಿಸಿದರು. ಸಂಘದ ರಾಜ್ಯ ಸಮಿತಿ ಸದಸ್ಯ ಗೂಳಿಪುರ ನಂದೀಶ್, ಜಿಲ್ಲಾಧ್ಯಕ್ಷ ದೇವರಾಜ ಕಪ್ಪಸೋಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌಡಳ್ಳಿ ಮಹೇಶ್ ಮತ್ತು ಇತರರು ಇದ್ದರು.