ಜಿಲ್ಲೆ

13ರಂದು ಬಿಜೆಪಿ-ಜೆಡಿಎಸ್ ವಿರುದ್ಧ ಧರಣಿ

ಚಾಮರಾಜನಗರ: ಹಿಂದುಳಿದ ವರ್ಗಗಳ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿ, ಜೆಡಿಎಸ್ ಪಾದಯಾತ್ರೆ ವಿರುದ್ಧ ಶ್ರಮಿಕ ವರ್ಗಗಳ ಒಕ್ಕೂಟವು ಆ.13ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಮುಖಂಡ ಪು.ಶ್ರೀನಿವಾಸನಾಯಕ ತಿಳಿಸಿದರು.

ಅಂದು ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಸಮಾವೇಶಗೊಂಡು ಅಲ್ಲಿಂದ ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿರಸ್ತೆಯ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಈ ಪ್ರತಿಭಟನೆಗೆ ಶ್ರಮಿಕ ವರ್ಗಕ್ಕೆ ಸೇರಿದ ಹಾಲಿ ಹಾಗೂ ಮಾಜಿ ಚುನಾಯಿತ ಜನಪ್ರತಿನಿಧಿಗಳು, ಯಜಮಾನರು, ಮುಖಂಡರು, ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಿದ್ದರಾಮಯ್ಯ ಅವರು ಶ್ರಮಿಕ ವರ್ಗಗಳ ಪರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರುವುದನ್ನು ಸಹಿಸದೆ ಬಿಜೆಪಿ, ಜೆಡಿಎಸ್ ರಾಜಕೀಯ ಅಸ್ಥಿರತೆಯನ್ನು ನಿರ್ಮಿಸಿ ಶ್ರಮಿಕ ವರ್ಗಗಳಿಗೆ ಸಿಗುವ ಸೌಲಭ್ಯಗಳನ್ನು ತಡೆಯುವ ಸಲುವಾಗಿ ಸಿದ್ದರಾಮಯ್ಯ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿವೆ. ಆದ್ದರಿಂದ ಶ್ರಮಿಕ ವರ್ಗಗಳಿಗೆ ಆಗುವ ಅನ್ಯಾಯ ಹಾಗೂ ಶ್ರಮಿಕ ವರ್ಗಗಳ ನಾಯಕರ ಮೇಲೆ ಆಗುವ ರಾಜಕೀಯ ಅಸ್ಥಿರತೆಯನ್ನು ವಿರೋಧಿಸುವ ಸಲುವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜ್ಯ ಸರ್ಕಾರ ಜಾರಿಗೆ ತಂದ 5 ಗ್ಯಾರಂಟಿ ಯೋಜನೆಗಳು ಎಲ್ಲರಿಗೂ ಸಿಗುತ್ತಿವೆ. ಆದರಲ್ಲೂ ಈ ಯೋಜನೆಗಳು ಉಳ್ಳವರಿಗೆ ಹೆಚ್ಚು ಲಾಭವಾಗಿದೆ. ಬಿಜೆಪಿ, ಜೆಡಿಎಸ್ ಅವಧಿಯಲ್ಲೂ ಅನೇಕ ಹಗರಣಗಳು ನಡೆದಿದ್ದು, ಯಾವುದೇ ಕ್ರಮವಾಗಿಲ್ಲ. ನಿಮ್ಮ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ನೀಡಲಾಗಿದೆ. ನಿಮ್ಮ ಪಕ್ಷದ ಶಾಸಕರೂ ನಿವೇಶನ ಪಡೆದಿದ್ದಾರೆ. ಅದರ ಬಗ್ಗೆ ಏಕೆ ಚಕಾರ ಎತ್ತದೆ ಮುಖ್ಯಮಂತ್ರಿ ಅವರನ್ನೇ ಟಾರ್ಗೆಟ್ ಮಾಡಿ ಅಧಿಕಾರದಿಂದ ಕೆಳಗಿಸಲು ಪಾದಯಾತ್ರೆ ಹಮ್ಮಿಕೊಂಡಿರುವುದು ಸರಿಯಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಬಸವನಪುರ ರಾಜಶೇಖರ್, ಚಿನ್ನಸ್ವಾಮಿ, ಮಸಗಾಪುರ ಸ್ವಾಮಿ, ಅಫ್ಜಲ್ ಅಹಮ್ಮದ್ ಹಾಜರಿದ್ದರು.