ಜಿಲ್ಲೆ

ಜನಾಂದೋಲನ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ

ಎ.ಎಸ್.ಮಣಿಕಂಠ

ಚಾಮರಾಜನಗರ: ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿವೇಶನಪಡೆದಿದ್ದಾರೆ ಎಂಬ ಬಿಜೆಪಿಯವರ ಆರೋಪದ ಬಗ್ಗೆ ಜನರಿಗೆ ಸತ್ಯಾಂಶ ತಿಳಿಸಲು ಆ.9ರಂದು ಮೈಸೂರಿನಲ್ಲಿ ಕಾಂಗ್ರೆಸ್ ಬೃಹತ್ ಜನಾಂದೋಲನ ಸಮಾವೇಶ ನಡೆಯಲಿದ್ದು, ಅಂದು ಜಿಲ್ಲೆಯ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಮನವಿ ಮಾಡಿದರು.

ನಗರದ ಜಿಲ್ಲಾಕಾಂಗ್ರೆಸ್ ಕಚೇರಿಯಲ್ಲಿ ಮೈಸೂರು ಜನಾಂದೋಲನ ಸಮಾವೇಶ ಕುರಿತು ಮಂಗಳವಾರ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮೈಸೂರಿನ ಮಹಾರಾಜಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸಚಿವರು ಭಾಗವಹಿಸುವರು. ಬಿಜೆಪಿಯವರು ಆರೋಪಿಸಿರುವ ಮುಡಾಹಗರಣಕ್ಕೆ ಸಂಬಂಧಿಸಿದಂತೆ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಎಳೆಎಳೆಯಾಗಿ ಜನರಮುಂದೆ ಸತ್ಯಾಂಶ ಬಿಚ್ಚಿಡಲಿದ್ದಾರೆ. ಬಸವರಾಜಬೊಮ್ಮಾಯಿ ಅವರ ಸರ್ಕಾರದ ಅವಧಿಯಲ್ಲೇ ಸಿದ್ದರಾಮಯ್ಯ ಅವರಿಗೆ ಮುಡಾದಲ್ಲಿ 50;50 ಅನುಪಾತದಲ್ಲಿ ಮೂರುವರೆ ಎಕರೆ ಜಮೀನುನೀಡಲಾಗಿದೆ. ಹೀಗಿದ್ದರೂ ಬಿಜೆಪಿಯವರು ಇದನ್ನೇ ನೆಪವಾಗಿಟ್ಟುಕೊಂಡು ಪಾದಯಾತ್ರೆಗೆ ಮುಂದಾಗಿರುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯವರ ಪ್ರಯತ್ನ ಫಲಿಸುವುದಿಲ್ಲ ಎಂದರು.

ಅ.10ರಂದು ಆಲೂರಿನಲ್ಲಿ ನಡೆಯುವ ಬಿ.ರಾಚಯ್ಯ ಸ್ಮಾರಕ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದು, ಜಿಲ್ಲೆಯಿಂದ ಹೆಚ್ಚಿನಸಂಖ್ಯೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಚುನಾಯಿತಜನಪ್ರತಿನಿಧಿಗಳು ಭಾಗವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್(ಮುನ್ನ), ಚಾಮರಾಜನಗರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ ಜಿಲ್ಲಾಕಾಂಗ್ರೆಸ್ ಮಹಿಳಾಘಟಕ ಅಧ್ಯಕ್ಷೆ ಲತಾಜತ್ತಿ, ಎಸ್ಟಿ ಮೋರ್ಚಾ ರಾಜ್ಯಪ್ರಧಾನ ಕಾರ್ಯದರ್ಶಿ ಪು.ಶ್ರೀನಿವಾಸನಾಯಕ, ಕನಿಷ್ಠ ವೇತನಸಲಹಾಮಂಡಳಿ ಮಾಜಿಅಧ್ಯಕ್ಷ ಉಮೇಶ್, ಮುಖಂಡ ಮಹೇಶ್‌ಕುದರ್ ಹಾಗೂ ಇತರರು ಭಾಗವಹಿಸಿದ್ದರು.