ಚಾಮರಾಜನಗರ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರ ಆರೋಪದ ಬಗ್ಗೆ ಜನರಿಗೆ ಸತ್ಯಾಂಶ ತಿಳಿಸಲು ಆ.9ರಂದು ಮೈಸೂರಿನಲ್ಲಿ ಕಾಂಗ್ರೆಸ್‌ನಿಂದ ಬೃಹತ್ ಜನಾಂದೋಲನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಅಂದು ಜಿಲ್ಲೆಯಿಂದ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಮನವಿ ಮಾಡಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮೈಸೂರು ಜನಾಂದೋಲನ ಸಮಾವೇಶ ಕುರಿತು ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಪುಟದ ಸಚಿವರು ಭಾಗವಹಿಸುವರು. ಬಿಜೆಪಿಯವರು ಆರೋಪಿಸಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಎಳೆಎಳೆಯಾಗಿ ಜನರ ಮುಂದೆ ಸತ್ಯಾಂಶ ಬಿಚ್ಚಿಡಲಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲೇ ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ನೀಡಲಾಗಿದೆ. ಹೀಗಿದ್ದರೂ ಬಿಜೆಪಿಯವರು ಇದನ್ನೇ ನೆಪವಾಗಿಟ್ಟುಕೊಂಡು ಪಾದಯಾತ್ರೆಗೆ ಮುಂದಾಗಿರುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಬಿಜೆಪಿಯವರ ಪ್ರಯತ್ನ ಫಲಿಸುವುದಿಲ್ಲ ಎಂದರು.
ಅ.10ರಂದು ಆಲೂರಿನಲ್ಲಿ ನಡೆಯುವ ಬಿ.ರಾಚಯ್ಯ ಸ್ಮಾರಕ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್(ಮುನ್ನ), ಚಾಮರಾಜನಗರ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲತಾಜತ್ತಿ, ಎಸ್ಟಿ ಮೋರ್ಚಾ ರಾಜ್ಯಪ್ರಧಾನ ಕಾರ್ಯದರ್ಶಿ ಪು.ಶ್ರೀನಿವಾಸ ನಾಯಕ, ಕನಿಷ್ಠ ವೇತನ ಸಲಹಾ ಮಂಡಳಿ ಮಾಜಿ ಅಧ್ಯಕ್ಷ ಉಮೇಶ್, ಮುಖಂಡ ಮಹೇಶ್ ಕುದರ್ ಭಾಗವಹಿಸಿದ್ದರು.