ಚಾಮರಾಜನಗರ: ಗುಣಮಟ್ಟದ ಉತ್ಪನ್ನಗಳನ್ನು ಪಡೆಯುವ ನಿಟ್ಟಿನಲ್ಲಿ ರೈತರು ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ಎಸ್.ಯೋಗೇಶ್ ಸಲಹೆ ನೀಡಿದರು.
ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಹರದನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಶನಿವಾರ ಆಯೋಜಿಸಿದ್ದ ಅಲಸಂದೆ ಬೆಳೆಯ ಸಮಗ್ರ ನಿರ್ವಹಣೆ ಕುರಿತು ಬೆಳೆ ಪ್ರಾತ್ಯಕ್ಷಿಕೆಗಳ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೆ.ಬಿ.ಸಿ-9 ಅಲ್ಪಾವಧಿ ಅಲಸಂದೆ ತಳಿಯಾಗಿದ್ದು 80 ರಿಂದ 85 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಮಧ್ಯಮ, ದಪ್ಪ ಹಾಗು ತಿಳಿ ಕಂದು ಬಣ್ಣದ ಕಾಳುಗಳನ್ನು ಹೊಂದಿರುತ್ತದೆ. ರೈತರು ಸಮಗ್ರ ನಿರ್ವಹಣಾ ಕ್ರಮಗಳನ್ನು ಅನುಸರಿಸಿ ಬೆಳೆಯುವುದರಿಂದ ಉತ್ತಮ ಗುಣಮಟ್ಟದ ಉತ್ಪನ್ನ ದೊರೆಯುತ್ತದೆ. ಸುಧಾರಿತ ತಳಿಯನ್ನು ಅಳವಡಿಸಿಕೊಂಡು ಗುಣಮಟ್ಟದ ಹಾಗೂ ಅಧಿಕ ಇಳುವರಿಯನ್ನು ಪಡೆದು ಬೀಜೋತ್ಪಾದನೆಗೆ ಸಹಕರಿಸಬೇಕೆಂದು ಕರೆ ನೀಡಿದರು.
ಮಂಡ್ಯ ಕೃಷಿ ವಿಜ್ಞಾನ ಕೇಂದ್ರದ ಬೀಜ ಕೇಂದ್ರದ ಮನೋಹರ್ ಮಾತನಾಡಿ, ಹೆಚ್ಚಿನ ರೈತರು ಬೀಜೋತ್ಪಾದನೆ ಕೈಗೊಳ್ಳಬೇಕು ಹಾಗೂ ಬೀಜೋತ್ಪಾದನೆ ಕೈಗೊಳ್ಳುವಾಗ ಸೂಕ್ತ ಕ್ರಮಗಳನ್ನು ಅನುಸರಿಸಬೇಕು. ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಗುಣಮಟ್ಟದ ಬೀಜೋತ್ಪಾದನೆ ಕೈಗೊಳ್ಳಬೇಕೆಂದು ತಿಳಿಸಿದರು.
ಪ್ರಗತಿಪರ ರೈತ ಶಿವಪ್ಪ ಮಾತನಾಡಿ, ಕೆಬಿಸಿ-9 ಅಲಸಂದೆ ತಳಿಯು ತಾವು ಹಿಂದೆ ಬೆಳೆಯುತ್ತಿದ್ದ ಸ್ಥಳೀಯ ತಳಿಗಿಂತ ಕಡಿಮೆ ಅವಧಿಯದಾಗಿದ್ದು, ಇದಕ್ಕೆ ಯಾವುದೇ ರೀತಿಯ ರೋಗ ಕಂಡುಬಂದಿರುವುದಿಲ್ಲ. ಅದರಲ್ಲೂ, ಹಳದಿ ನಂಜು ರೋಗ ಸಂಪೂರ್ಣವಾಗಿ ನಿಯಂತ್ರಿತಗೊಂಡಿದ್ದು, ಹಿಂದೆ ಬೆಳೆಯುತ್ತಿದ್ದ ಸ್ಥಳೀಯ ತಳಿಯು ಈ ರೋಗಕ್ಕೆ ತುತ್ತಾಗಿ ಬೆಳೆ ನಷ್ಟವಾಗುತ್ತಿತ್ತು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೈತ ರಾಮಯ್ಯ ಅವರು ಉತ್ತಮವಾಗಿ ಬೆಳೆದಿದ್ದ ಕೆ.ಬಿ.ಸಿ-9 ಅಲಸಂದೆ ತಳಿಯ ತಾಕನ್ನು ಎಲ್ಲಾ ರೈತರು ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಸಿದ್ದರಾಜು, ಮಹದೇವಸ್ವಾಮಿ ಹಾಗೂ ಇತರರು ಭಾಗವಹಿಸಿದ್ದರು.