ಚಾಮರಾಜನಗರ: ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕೀಯ ಶಕ್ತಿಯನ್ನು ಅಸ್ಥಿರ ಗೊಳಿಸಲು ಹೊರಟಿರುವ ಪಟ್ಟ ಭದ್ರಾ ಶಕ್ತಿಗಳ ವಿರುದ್ಧ ಹೋರಾಟ ರೂಪಿಸಲಾಗುವುದು ಎಂದು ಶ್ರಮಿಕ ವರ್ಗಗಳ ಒಕ್ಕೂಟದ ಮುಖಂಡ ಪು.ಶ್ರೀನಿವಾಸನಾಯಕ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶ್ರಮಿಕ ವರ್ಗಗಳ ಒಕ್ಕೂಟದ ವತಿಯಿಂದ ಶನಿವಾರ ಆಯೋಜಿಸಿದ್ದ ಚಿಂತನಾ ಸಭೆಯಲ್ಲಿ ಕೈಗೊಂಡ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳ ನೇತಾರ, ನಮ್ಮ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಿಜೆಪಿ, ಜೆಡಿಎಸ್ ಪಕ್ಷಗಳ ನಾಯಕರು ಹಗರಣದಲ್ಲಿ ಸಿಲುಕಿಸಿ, ರಾಜಕೀಯದಿಂದ ಹೊರ ಹಾಕುವ ಹುನ್ನಾರ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಸಿ ಮನುವಾದಿ ಸರ್ಕಾರ ತರುವ ತರುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ದ ಶ್ರಮಿಕ ವರ್ಗಗಳು ಒಗ್ಗೂಡಿ ಪ್ರತಿ ಹೋರಾಟ ರೂಪಿಸುವ ಮೂಲಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯಾಗಿ ಉಳಿಸಿಕೊಳ್ಳಬೇಕಿದೆ ಎಂದರು.
ಚಾಮರಾಜನಗರದಿಂದಲೇ ಹೋರಾಟ ಆರಂಭಿಸುವ ಮೂಲಕ, ರಾಜ್ಯ ವ್ಯಾಪಿ ಹೋರಾಟ ಮಾಡಬೇಕು.ಅದಕ್ಕಾಗಿ ಈ ಸಭೆಯನ್ನು ಕರೆಯಲಾಗಿದ್ದು ಮುಖಂಡರು ಸಭೆಯಲ್ಲಿ ಬೆಂಬಲ ಸೂಚಿಸಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಜಿಲ್ಲೆಯ ಹಿಂದುಳಿದ ವರ್ಗಗಳ ಮುಖಂಡರೊಂದಿಗೆ ಚರ್ಚಿಸಿ ಸಲಹೆಗಳನ್ನು ಪಡೆದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರ ಜಿಲ್ಲೆಯಿಂದಲೇ ಹೋರಾಟ ರೂಪಿಸಲಾಗುವುದು ಎಂದರು.
ಸಭೆಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ಸಿ.ಎ.ಮಹದೇವಶೆಟ್ಟಿ, ಮಾಜಿ ಸದಸ್ಯರಾದ ರಮೇಶ್, ಮಧುವನಹಳ್ಳಿ ಶಿವಕುಮಾರ್, ಎಲ್.ನಾಗರಾಜು ಕಮಲ್, ತಾ.ಪಂ.ಸದಸ್ಯ ರಾಜು, ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವನಪುರ ರಾಜಶೇಖರ್, ಎಂ.ಶಿವಮೂರ್ತಿ, ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಲಿಂಗರಾಜು, ಸಿದ್ದರಾಮಯ್ಯ ಅಭಿಮಾನಿ ಬಳಗ ದ ಜಿಲ್ಲಾಧ್ಯಕ್ಷ ಬೆಳ್ಳೇಗೌಡ, ಮೂಳ್ಳೂರು ಶಿವಮಲ್ಲು, ಸುಭಾಷ್ ಮಾಡ್ರಹಳ್ಳಿ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎನ್. ನಂಜೇಗೌಡ, ಸೋಮಣ್ಣೇಗೌಡ, ಮುಖಂಡರಾದ ಜನ್ನೂರುಮಹದೇವು, ಸಿ.ಎಂ.ಶಿವಣ್ಣ, ದೊಡ್ಡಿಂದುವಾಡಿ ಸಿದ್ದರಾಜು, ಕೆರೆಹಳ್ಳಿ ರೇವಣ್ಣ ಹಾಗೂ ಇತರರು ಭಾಗವಹಿಸಿದ್ದರು.