ಜಿಲ್ಲೆ

ಬಿಟ್ಟರೂ, ಬಿಡದ ಕೇರಳ-ಚಾ.ನಗರ ನಂಟು

ಎ.ಎಸ್.ಮಣಿಕಂಠ

ಚಾಮರಾಜನಗರ: ಕೌಶಲ್ಯಕ್ಕೆ ತಕ್ಕ ಉದ್ಯೋಗ, ಕೆಲಸಕ್ಕೆ ತಕ್ಕಂತೆ ಕೂಲಿ, ಉತ್ತಮವಾದ ಊಟ ಮತ್ತು ವಸತಿ ಸೌಲಭ್ಯ ಕೇರಳ ಮತ್ತು ಚಾಮರಾಜನಗರ ಜನತೆಯ ನಂಟನ್ನು ಬಿಡಿಸದಂತಾಗಿದೆ.

ಕೇರಳ ರಾಜ್ಯದ ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ ಗಡಿ ಜಿಲ್ಲೆ ಚಾಮರಾಜನಗರದ ಜನರು ಸಿಲುಕಿ, ಹಲವರು ಸಾವನ್ನಪ್ಪಿದ್ದಾರೆ. ಮತ್ತೆ ಕೆಲವರು ಭೂಕುಸಿತದಲ್ಲಿ ಕಾಣೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈ ನಡುವೆ ಕೇರಳ ರಾಜ್ಯದಲ್ಲಿ ನೆಲೆಸಿರುವ ಕನ್ನಡಿಗರನ್ನು ರಾಜ್ಯಕ್ಕೆ ಸ್ಥಳಾಂತರ ಮಾಡುವ ಮಾತುಗಳು ಕೇಳಿಬರುತ್ತಿವೆ. ಆದರೆ ಕೇರಳದಲ್ಲಿ ದೊರೆಯುವ ಉದ್ಯೋಗಾವಕಾಶ, ಕೂಲಿ ಕೆಲಸ, ಉತ್ತಮವಾದ ವೇತನ, ವಸತಿ ಸೌಕರ್ಯ, ಊಟದ ವ್ಯವಸ್ಥೆ ಹಾಗೂ ಇನ್ನಿತರೆ ಸೌಲಭ್ಯಗಳಿಂದಾಗಿ ಜಿಲ್ಲೆಯ ಜನರು ಕೇರಳವನ್ನೇ ನೆಚ್ಚಿಕೊಂಡಿದ್ದಾರೆ.

ಕೇರಳ ರಾಜ್ಯದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ, ಕಲ್ಲಪೆಟ್ಟ, ಮಾನಂದವಾಡಿ, ಮೇಪ್ಪಾಡಿ, ಮುತ್ತಂಗ ಹಾಗೂ ಇನ್ನಿತರೆ ಪಟ್ಟಣಗಳಲ್ಲಿ, ಜಿಲ್ಲೆಯ ಸಾವಿರಾರು ಜನರು ಉದ್ಯೋಗ ಮಾಡುತ್ತಿದ್ದಾರೆ. ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ವಯನಾಡು ಜಿಲ್ಲೆಯ ಹಲವೆಡೆ ಇರುವ ರೆಸ್ಟೋರೆಂಟ್, ಪ್ರಸಿದ್ಧವಾದ ಹೋಟೆಲ್ಗಳು, ಬೇಕರಿಗಳಲ್ಲಿ ಯುವಕರು ಹೆಚ್ಚಾಗಿ ಕೆಲಸ ಮಾಡುತ್ತಿದ್ದಾರೆ. ಅದಲ್ಲದೇ ಕೇರಳದಲ್ಲಿ ಹೇರಳವಾಗಿರುವ ಟೀ ಮತ್ತು ಕಾಫಿ ಎಸ್ಟೇಟ್‌ಗಳು ಹಾಗೂ ಗಾರೆ ಕೆಲಸಕ್ಕಾಗಿ ಜಿಲ್ಲೆಯ ಜನರು ಹೆಚ್ಚಾಗಿ ವಲಸೆ ಹೋಗುತ್ತಾರೆ. ಕೇರಳಕ್ಕೆ ಉದ್ಯೋಗ ಹರಸಿ ಹೋಗುವ ಕೂಲಿ ಕಾರ್ಮಿಕರು, ಇಂದಿಗೂ ಉದ್ಯೋಗದಲ್ಲಿ ನಿರತರಾಗಿರುವ ಯುವಕರು ಕೇರಳದಲ್ಲಿ ಸಂಭವಿಸಿರುವ ಭೂಕುಸಿತಕ್ಕೆ ಯಾವುದೇ ರೀತಿಯಲ್ಲೂ ಭಯಭೀತರಾಗುತ್ತಿಲ್ಲ.

ನಾವು ಯಾವುದೇ ಕಾರಣಕ್ಕೂ ಕೇರಳದಲ್ಲಿ ಕೆಲಸವನ್ನು ಬಿಟ್ಟು ಬರುವುದಿಲ್ಲ ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ನಾವು ಒಂದು ವೇಳೆ ಕೆಲಸ ಬಿಟ್ಟು ಬಂದರೂ, ಕೇರಳದ ಉದ್ಯಮಿಗಳು ನಮ್ಮನ್ನು ಬಿಟ್ಟು ಕೊಡಲು ತಯಾರಿಲ್ಲ ಎಂದು ಹೇಳುತ್ತಿದ್ದಾರೆ. ವಯನಾಡಿನಲ್ಲಿ ನಡೆದಿರುವ ಸರಣಿ ಭೂಕುಸಿತ ನೂರಾರು ಜನರ ಬದುಕನ್ನು ನಾಶಮಾಡಿದ್ದರೂ, ಕೇರಳ ಮತ್ತು ಚಾಮರಾಜನಗರದ ನಂಟನ್ನು ಕಡಿಯಲಾರದು ಎಂಬುದು ವಲಸಿಗರ ಅಭಿಪ್ರಾಯವಾಗಿದೆ.

ಒಂದೇ ಗ್ರಾಮದ ಸಾವಿರಾರು ಯುವಕರು:
ಕೇರಳದ ವಯನಾಡು, ಸುಲ್ತಾನ್ ಭತ್ತೇರಿ ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮದ ಸಾವಿರಾರು ಯುವಕರು ಹಲವಾರು ಕೆಲಸದಲ್ಲಿ ನಿರತರಾಗಿದ್ದಾರೆ. ಹೋಟೆಲ್‌ಗಳಲ್ಲಿ ಬಾಣಸಿಗರಾಗಿಯೇ ಹೆಚ್ಚಿನ ಯುವಕರು ಇದ್ದಾರೆ. ಅದಲ್ಲದೇ ವಿವಿಧ ಬೇಕರಿಗಳು, ಲಾಟರಿ, ಬಟ್ಟೆ ಅಂಗಡಿಗಳು, ಜ್ಯೂಸ್ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಹೊಂಗನೂರಿನ ಹೆಚ್ಚಿನ ಜನರು ಮಲಯಾಳವನ್ನು ಚೆನ್ನಾಗಿ ಮಾತನಾಡುತ್ತಾರೆ. ಹಲವು ಯುವಕರು ಕೇರಳದಿಂದ ಕೆಲಸ ಬಿಟ್ಟು ಬಂದಾಗ ಅಲ್ಲಿನ ವ್ಯಾಪಾರಿಗಳು, ಹೊಂಗನೂರು ಗ್ರಾಮಕ್ಕೆ ಬಂದು ಯುವಕರನ್ನು ಮನವೊಲಿಸಿ ಕರೆದುಕೊಂಡು ಹೋಗಿರುವ ಉದಾಹರಣೆಗಳು ಇವೆ. ಕೆಲಸಗಾರರೊಂದಿಗೆ ಉತ್ತಮವಾದ ಒಡನಾಟವನ್ನು ಇಟ್ಟುಕೊಂಡಿರುವ ಮಾಲೀಕರ ವಿಶ್ವಾಸಕ್ಕೆ ಕಟ್ಟುಬಿದ್ದು, ಹೆಚ್ಚಿನ ಯುವಕರು ಅಲ್ಲೇ ಬದುಕನ್ನು ಕಟ್ಟಿಕೊಂಡಿದ್ದಾರೆ.

ಇಲ್ಲಿಗಿಂತಲೂ ಹೆಚ್ಚಿನ ಸಂಬಳ:
ವಯನಾಡಿನ ಹಲವೆಡೆ ಗಾರೆ ಕೆಲಸ ಮಾಡಿದರೇ ದಿನಕ್ಕೆ 100 ರೂ, ಕೂಲಿ ದೊರೆಯುತ್ತದೆ. ಟೀ, ಕಾಫಿ ಎಸ್ಟೇಟ್‌ಗಳಲ್ಲಿ ಮಹಿಳೆಯರಿಗೆ 700-800 ರೂ, ಕೂಲಿ ಸಿಗುತ್ತದೆ. ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಯುವಕರಿಗೆ 30-40 ಸಾವಿರ ರೂ, ಸಂಬಳವನ್ನು ನೀಡುತ್ತಾರೆ. ಈ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಚಾಮರಾಜನಗರದ ಜನರು ಉದ್ಯೋಗ ಹರಸಿಕೊಂಡು ಕೇರಳಕ್ಕೆ ಹೋಗುತ್ತಾರೆ. ಕೂಲಿ ಮತ್ತು ಸಂಬಳದ ಜತೆಗೆ ಉಳಿದುಕೊಳ್ಳಲು ಉತ್ತಮವಾದ ವಸತಿ ಸೌಕರ್ಯ ಒದಗಿಸಿ, ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡುವುದರಿಂದ ಯುವಕರು ಹೆಚ್ಚಾಗಿ ಅಲ್ಲೇ ಉಳಿದುಬಿಡುತ್ತಾರೆ. ಹಲವರು ಮದುವೆಯಾದ ಬಳಿಕ ಕೇರಳದಲ್ಲೇ ಹೆಂಡತಿ-ಮಕ್ಕಳ ಜತೆಗೆ ಬದುಕು ಕಟ್ಟಿಕೊಂಡಿದ್ದಾರೆ. ಈಗಲೂ ಕೇರಳದ ನಂಟನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂಬ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ವಯನಾಡು ಭೂಕುಸಿತದಲ್ಲಿ ಮೃತಪಟ್ಟ ಮಂಡ್ಯ ಮೂಲದ ದಂಪತಿಗಳು ಕೆಲವು ತಿಂಗಳ ಹಿಂದೆ ನಾನು ಕೆಲಸಮಾಡುವ ಹೋಟೆಲ್‌ಗೆ ಬಂದಿದ್ದರು. ಕನ್ನಡದವನು ಎಂದು ಗೊತ್ತಾಗಿ ತುಂಬಾ ಪ್ರೀತಿಯಿಂದ ಮಾತನಾಡಿದ್ದರು. ಅವರು ಸಾವನ್ನಪ್ಪಿದ್ದನ್ನು ಕೇಳಿ ತುಂಬಾ ದುಃಖವಾಯಿತು. ವಯನಾಡು, ಸುಲ್ತಾನ್ ಭತ್ತೇರಿಯಲ್ಲಿ ಇರುವ ಹೋಟೆಲ್ ಮಾಲೀಕರು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ. ಉತ್ತಮ ಸಂಬಳ, ಊಟ-ವಸತಿ ದೊರೆಯುವುದರಿಂದ ಕೇರಳದಲ್ಲಿ ಹೆಚ್ಚಿನ ಜನರು ಉದ್ಯೋಗ ಮಾಡುತ್ತಿದ್ದೇವೆ. ನಾನು ಸದ್ಯಕ್ಕೆ ಸುಲ್ತಾನ್ ಭತ್ತೇರಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದೇನೆ.-ಪ್ರವೀಣ್, ಹೊಂಗನೂರು, ಚಾಮರಾಜನಗರ