ಜಿಲ್ಲೆ

ಜು.28 ರಂದು ಮುದುಕನ ಮದುವೆ ನಾಟಕ ಪ್ರದರ್ಶನ

ಚಾಮರಾಜನಗರ: ಸುಮಾರು 50 ವರ್ಷಗಳಿಂದ ಖ್ಯಾತಿ ಪಡೆದಿರುವ ಮುದುಕನ ಮದುವೆ ಹಾಸ್ಯ ನಾಟಕ ಪ್ರದರ್ಶನವನ್ನು ಜು.28 ರಂದು ಆಯೋಜಿಸಲಾಗಿದೆ ಎಂದು ಹಾಸ್ಯನಟ ಮೂಗ್‌ಸುರೇಶ್ ತಿಳಿಸಿದರು.

ನಗರದ ವರನಟ ಡಾ.ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮಧ್ಯಾಹ್ನ 2 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಎರಡು ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಖ್ಯಾತ ನಾಟಕಕಾರ ಪಿ.ಬಿ.ದುತ್ತಗಿರಿ ಅವರು ರಚಸಿರುವ ಮುದುಕನ ಮದುವೆ ನಾಟಕವನ್ನು ನಾನು ಮತ್ತು ನಮ್ಮ ತಂಡದವರು ಅಭಿನಯಿಸಲಿದ್ದು, ನಾಟಕ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಟಕವನ್ನು ವೀಕ್ಷಣೆ ಮಾಡಬೇಕು ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಮುದುಕನ ಮದುವೆ ಸುಮಾರು 50 ವರ್ಷಗಳು ಹಳೆಯ ನಾಟಕವಾಗಿದ್ದು, ಸಾಕಷ್ಟು ತಂಡಗಳು ಅಭಿನಯಿಸಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇದು ಸಾರ್ವಜನಿಕರಿಗೆ ಬಹಳ ಇಷ್ಟವಾದಂತಹ ನಾಟಕವಾಗಿದೆ. ನಾನು ಹವ್ಯಾಸಿ ರಂಗಭೂಮಿಯಲ್ಲಿ 7-8 ಸಾವಿರ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಸಿನಿಮಾ, ಧಾರಾವಾಹಿಗಳಲ್ಲಿ ಇಂದಿಗೂ ಅಭಿನಯ ಮಾಡುತ್ತಿದ್ದೇನೆ. ಹವ್ಯಾಸಿ ರಂಗಭೂಮಿ ಮತ್ತು ವೃತ್ತಿ ರಂಗಭೂಮಿ ಸಾಕಷ್ಟು ಅನುಭವ ಕಲಿಸಿದೆ. ರಂಗಭೂಮಿಯನ್ನು ಜೀವಂತಗೊಳಿಸುವ ನಿಟ್ಟಿನಲ್ಲಿ ಈ ನಾಟಕವನ್ನು ಆಯೋಜಿಸಲಾಗಿದೆ. ನಾಟಕ ಪ್ರದರ್ಶನಕ್ಕೆ 150, 200 ರೂ, ಟಿಕೆಟ್ ದರ ನಿಗದಿ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ನಾಟಕ ವೀಕ್ಷಣೆ ಮಾಡಬೇಕು ಎಂದು ಕೋರಿದರು.

ಗೋಷ್ಠಿಯಲ್ಲಿ ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ.ನರಸಿಂಹಮೂರ್ತಿ, ಕರ್ನಾಟಕ ರಂಗ ಪರಿಷತ್ ಜಿಲ್ಲಾಧ್ಯಕ್ಷ ಮತ್ತು ಹಿರಿಯ ಕಲಾವಿದ ಉಮ್ಮತ್ತೂರು ಬಸವರಾಜು, ಸಮಾಜ ಸೇವಕರಾದ ಸುರೇಶ್ ಗೌಡ್ರು, ಡಾ.ಪರಮೇಶ್ವರಪ್ಪ ಹಾಜರಿದ್ದರು.