ಚಾಮರಾಜನಗರ: ಇತ್ತೀಚಿನ ಯುವ ಸಾಹಿತಿಗಳು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಸಾಹಿತ್ಯ ರಚನೆ ಮಾಡಬೇಕು ಎಂದು ಹಿರಿಯ ಹೋರಾಟಗಾರ, ಪ್ರಗತಿಪರ ಚಿಂತಕ ವೆಂಕಟರಮಣಸ್ವಾಮಿ(ಪಾಪು) ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಸಾಕಷ್ಟು ಕವಿಗಳು ಇಂದಿಗೂ ನೋವು, ನಲಿವು, ಹತಾಶೆಗಳ ಕವಿತೆಗಳನ್ನೇ ಹೆಚ್ಚು ಅಪ್ಪಿಕೊಳ್ಳತ್ತಾರೆ. ಅದರ ಜತೆಗೆ ನಾಟಕ, ಪತ್ತೇದಾರಿ ಕಾದಂಬರಿಗಳನ್ನು ರಚಿಸುವ ಕಡೆ ಗಮನ ಹರಿಸಬೇಕು. ಪ್ರಸ್ತುತ ಸಮಾಜದಲ್ಲಿ ಸ್ವಾಭಿಮಾನದ ಸಾಹಿತ್ಯ ರಚನೆಯಾಗಬೇಕು, ಇಂದಿನ ದಿನಗಳಲ್ಲಿ ಅದು ಅಗತ್ಯವಾಗಿದೆ. ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ಬರಹಗಾರರು ತೊಡಗಿಸಿಕೊಂಡು ಸಂವೇದನಾ ಶೀಲ, ಮಾತೃ ಹೃದಯಿ ಸಾಹಿತ್ಯವನ್ನು ಹಿರತರಬೇಕು. ಮುಳ್ಳೂರು ನಾಗರಾಜ್ ಸಾಹಿತ್ಯವನ್ನು ಎಲ್ಲರೂ ಓದಿಕೊಳ್ಳಬೇಕು. ಜಿಲ್ಲೆಯಲ್ಲಿ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಮಾಡಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದೇನೆ ಎಂದರು.
ಹಿರಿಯ ಸಾಹಿತಿ ಮುಳ್ಳೂರು ಶಿವಮಲ್ಲು ಮಾತನಾಡಿ, ತನ್ನೊಳಗಿನ ಮಾತುಗಳನ್ನು ಜಗತ್ತಿಗೆ ಪರಿಚಯಿಸುವುದೇ ಕಾವ್ಯ. ಇಲ್ಲಿ ಕವಿತೆ ವಾಚಿಸಿದವರು ಮನದಾಳದ ಸಂವೇದನೆ, ಪ್ರತಿಭಟನೆ, ನೋವು, ನಲಿವನ್ನು ಕಾವ್ಯವಾಗಿಸಿದ್ದಾರೆ. ದಲಿತ ಕಾವ್ಯಗಳಲ್ಲಿ ಗಾಂಭೀರ್ಯತೆ ಬಹುಮುಖ್ಯವಾಗಿ ಹರಡಿಕೊಂಡಿದೆ. ಎಲ್ಲಾ ಸಾಹಿತ್ಯಗಳನ್ನು ಸೀಳಿಕೊಂಡು ನುಗ್ಗುವಂತಹ ಕಾವ್ಯಗಳು ಇದಾಗಿದೆ. ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕುತ್ತದೆ. ಪ್ರಸ್ತುತ ಹೋರಾಟದ ಮನಸ್ಸುಗಳನ್ನು ಕಟ್ಟುವಂತಹ ಕೆಲಸ ಆಗಬೇಕು. ಸಮಾಜದ ದಿಕ್ಕನ್ನು ಬದಲಾಯಿಸುವ, ಒಳಿತನ್ನು ಉಂಟುಮಾಡುವ ಸಾಧ್ಯತೆ ನಿಮ್ಮ ಸಾಹಿತ್ಯಕ್ಕಿದೆ ಎಂದು ತಿಳಿಸಿದರು.
ಕವಿಗೋಷ್ಠಿಯಲ್ಲಿ 15ಕ್ಕಿಂತಲೂ ಹೆಚ್ಚು ಯುವ ಹಾಗೂ ಹಿರಿಯ ಕವಿಗಳು ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿದರು. ಜಿಲ್ಲಾಧ್ಯಕ್ಷ ಗುರುರಾಜ್ ಯರಗನಹಳ್ಳಿ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಆನಂದ್ ರಾಜ್, ಡಾ.ಕುಮಾರ್ ಚಿಕ್ಕಹೊಳೆ, ಡಾ.ನಂಜರಾಜು, ಡಾ.ಮಹೇಶ್ ಕೋಡಿಉಗನೆ, ಮೂಕಳ್ಳಿ ಬಸವಣ್ಣ, ಗೋವಿಂದರಾಜು ಹಾಗೂ ಇತರರು ಉಪಸ್ಥಿತರಿದ್ದರು.