ಜಿಲ್ಲೆ

ಆದಿವಾಸಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಆದ್ಯತೆ ನೀಡಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಆದಿವಾಸಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಹೇಳಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಸಮತ್ವ ಟ್ರಸ್ಟ್, ಅಶೋಕ ಪರಿಸರ ಮತ್ತು ಪರಿಸರ ವಿಜ್ಞಾನ ಸಂಶೋಧನಾ ದತ್ತಿ(ಎಟ್ರಿ) ವತಿಯಿಂದ ಸೋಮವಾರ ಆಯೋಜಿಸಿದ್ದ ಆದಿವಾಸಿ ಕಾಲೇಜು ಯುವಜನ ಪ್ರೇರಣಾ ಕಾರ್ಯಾಗಾರ ಮತ್ತು ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆದಿವಾಸಿ ವಿದ್ಯಾರ್ಥಿಗಳು ಅರ್ಧಕ್ಕೆ ಕಾಲೇಜು ಬಿಡುವ ಪ್ರಕರಣಗಳು ಕಂಡುಬರುತ್ತಿವೆ. ಎಸ್ಸೆಸ್ಸೆಲ್ಸಿ, ಪಿಯುಸಿ ನಂತರ ವಿದ್ಯಾಭ್ಯಾಸ ಬಿಡದೆ ಉನ್ನತ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು. ಉದ್ಯೋಗ ಸಿಗಲು ಉತ್ತಮ ಅಂಕ ಗಳಿಸುವುದು ಮುಖ್ಯ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳು ಹೆದರುವ ಅಗತ್ಯವಿಲ್ಲ. ನಿರಂತರ ಪ್ರಯತ್ನ ಮಾಡಿ ಉತ್ತೀರ್ಣರಾಗಬೇಕು ಎಂದು ಸಲಹೆ ನೀಡಿದರು.

ಆದಿವಾಸಿಗಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ವಿದ್ಯಾರ್ಥಿ ವೇತನ ನೀಡುತ್ತಿದೆ. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಓದಿನ ಕಡೆ ಗಮನಹರಿಸಬೇಕು ಎಂದರು.

ಜಿಲ್ಲಾ ಬುಡಕಟ್ಟು ಆದಿವಾಸಿ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ಮಾತನಾಡಿ, ಗಿರಿಜನರಿಗೆ ಶಿಕ್ಷಣ ಬಹಳ ಮುಖ್ಯ. ಜಿಲ್ಲೆಯಲ್ಲಿ 20 ಬುಡಕಟ್ಟು ಆಶ್ರಮ ಶಾಲೆಗಳಿವೆ. ಎಸ್ಸೆಸ್ಸೆಲ್ಸಿ ಬಳಿಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದಿರುವುದು ತೀರ ಕಡಿಮೆ ಎಂದು ಹೇಳಿದರು.

ಹಲವು ವರ್ಷಗಳಿಂದ ಆದಿವಾಸಿಗಳ ಹಕ್ಕು, ಸೌಲಭ್ಯಗಳಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಆದಿವಾಸಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಮೂವರು ಪಿಎಚ್.ಡಿ ಮಾಡುತ್ತಿದ್ದಾರೆ ಎಂದು ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜ ಕಪ್ಪಸೋಗೆ ಕಾಡು ಜ್ಞಾನದ ಜಾಡು ಹಿಡಿದು ಎಂಬ ಪುಸ್ತಕ ಬಿಡುಗಡೆ ಮಾಡಿದರು. ಗಿರಿಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಣೆ ಮಾಡಲಾಯಿತು.

ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ತಾಲೂಕು ಅಧಿಕಾರಿ ನವೀನ್ ಭಟ್, ಸಮತ್ವ ಟ್ರಸ್ಟ್ ಅಧ್ಯಕ್ಷ ಡಾ.ಶ್ರೀನಿವಾಸ್, ಕಾರ್ಯದರ್ಶಿ ಡಾ.ಸಿದ್ದಪ್ಪಶೆಟ್ಟಿ, ಮುಖಂಡ ಜಡೇಸ್ವಾಮಿ, ಪುಟ್ಟಮ್ಮ, ರಂಗೇಗೌಡ, ಬಸವರಾಜು ಮತ್ತು ಇತರರು ಇದ್ದರು.