ಚಾಮರಾಜನಗರ : ಜನರನ್ನು ಕಾವ್ಯದತ್ತ ಸೆಳೆದರೆ ಅದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸಮಾನತೆಯೆಡೆಗೆ ಕೊಂಡೊಯ್ಯುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜು ಹೇಳಿದರು.
ನಗರದ ವರನಟ ಡಾ.ರಾಜ್ಕುಮಾರ್ ರಂಗಮಂದಿರದಲ್ಲಿ ಬೆಂಗಳೂರಿನ ರಂಗಮಂಡಲ, ಚಾಮರಾಜನಗರ ರಂಗವಾಹಿನಿ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕಾವ್ಯ ಸಂಸ್ಕೃತಿ ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾವ್ಯ ನಮ್ಮೆಲ್ಲರ ಬದುಕನ್ನು ವಿಕಾಸಗೊಳಿಸುವ, ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಿಸುವ ದಿವ್ಯ ಶಕ್ತಿ. ಕಾವ್ಯದಲ್ಲಿ ಎಲ್ಲರ ಬದುಕಿನ ಹಿತಚಿಂತನೆ ಮಾಡುವ ವಿಶೇಷ ಶಕ್ತಿ ಅಡಗಿದೆ. ಕಾವ್ಯದೆಡೆಗೆ ಜನರನ್ನು ಸೆಳೆಯುವ ಕಾರ್ಯ ಹೆಚ್ಚಾಗಬೇಕಿದೆ ಎಂದರು.
ಒಂದು ಕಾಲದಲ್ಲಿ ಕುವೆಂಪು ಅವರು ನಾಡಿನಲ್ಲಿ ಕಾವ್ಯದ ಮೂಲಕ ವೈಚಾರಿಕ ಪ್ರಜ್ಞೆ ಉಂಟು ಮಾಡುತ್ತಿದ್ದರೆ, ನಮ್ಮ ಸಿನಿಮಾ ನಟರು ಭಕ್ತಿಯ ಚಿತ್ರಗಳನ್ನು ಮಾಡುವ ಮೂಲಕ ಜನರನ್ನು ಗುಲಾಮಗಿರಿಗೆ ತಳ್ಳಿದರು. ಜನರು ಮುಕ್ತವಾಗಿ ಇರಬೇಕಾದರೆ ಕಾವ್ಯ ಅತ್ಯಂತ ಅಗತ್ಯ. ಜನರನ್ನು ಮನುಷ್ಯರನ್ನಾಗಿ ಮಾಡಲು ಕಾವ್ಯ ಸಂಸ್ಕೃತಿ ಸೃಷ್ಟಿಸಬೇಕಾಗಿದೆ ಎಂದು ತಿಳಿಸಿದರು.
ಕಾವ್ಯ ಸಂಸ್ಕೃತಿ ಯಾನ ಕಾರ್ಯಕ್ರಮದ ಸರ್ವಾಧಕ್ಷ ಹಾಗೂ ಹಿರಿಯ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ಮಂಟೇಸ್ವಾಮಿ, ಮಹದೇಶ್ವರ ಮಹಾಕಾವ್ಯಗಳನ್ನು ಜಗತ್ತಿಗೆ ನೀಡಿದ ಚಾಮರಾಜನಗರ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಮಹತ್ವದ ಸ್ಥಾನ ಪಡೆದಿದೆ. ಕಾವ್ಯ ತಾಳ್ಮೆ ಮತ್ತು ಸೌಹಾರ್ದತೆಯನ್ನು ಕಲಿಸುತ್ತದೆ. ಯಾರನ್ನಾದರೂ ಹಿಡಿದಿಟ್ಟುಕೊಳ್ಳುವ ಶಕ್ತಿ ಕಾವ್ಯಕ್ಕಿದೆ ಎಂದು ಎಲ್.ಎನ್.ಮುಕುಂದರಾಜ್ ತಿಳಿಸಿದರು.
ಸಾಮಾನ್ಯರಿಗೆ ದಕ್ಕದ ದರ್ಶನ ಭಾಗ್ಯ ಕವಿಗಳಿಗೆ ಸಿಗುತ್ತದೆ. ಬಹುತೇಕ ಕವಿಗಳು ಸ್ಫೂರ್ತಿ ತತ್ವವನ್ನು ನಂಬಿ ಕಂಗೆಟ್ಟಿದ್ದಾರೆ. ಸತ್ಯ ಮತ್ತು ಸೌಂದರ್ಯದ ಅಭಿವ್ಯಕ್ತಿಯೇ ಕಾವ್ಯವಾಗಿದೆ. ರಾಜಕೀಯ ಕೆಸರೆರಚಾಟ, ಧರ್ಮ ಧರ್ಮಗಳ ನಡುವಿನ ನಿರಂತರ ತಿಕ್ಕಾಟ, ಬಡವ ಶ್ರೀಮಂತರ ನಡುವೆ ಹೆಚ್ಚುತ್ತಿರುವ ಸಂದಿಗ್ಧ ಸ್ಥಿತಿಯಲ್ಲಿ ದೇಶವಿದೆ. ಈ ಕಾರಣಕ್ಕೆ ಅಪೂರ್ಣವಾದ ಪ್ರಜಾಪ್ರಭುತ್ವ ದೇಶವಾಗಿಯೇ ಭಾರತ ಉಳಿದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ರಂಗಕರ್ಮಿ ಕೆ.ವೆಂಕಟರಾಜು, ಮುಖಂಡ ವೆಂಕಟರಮಣಸ್ವಾಮಿ (ಪಾಪು), ಕಾವ್ಯ ಸಂಸ್ಕೃತಿ ಯಾನ ಸಂಚಾಲಕ ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ, ಸಿ.ಎಂ.ನರಸಿಂಹಮೂರ್ತಿ, ಸ್ವಾಮಿ ಪೊನ್ನಾಚಿ, ಕವಿ ಅನಿಲ್ ಕುಮಾರ, ಹೊಸೂರು, ಶ್ರೀಧರ್ ಸಿರಿ ಇತರರು ಇದ್ದರು.
ಗಮನಸೆಳೆದ ಕವಿಗೋಷ್ಠಿ:
ಕಾವ್ಯ ಸಂಸ್ಕೃತಿ ಯಾನ ಕಾರ್ಯಕ್ರಮದಲ್ಲಿ ನಡೆದ ಕವಿಗೋಷ್ಠಿ ಸಾಹಿತ್ಯ ಆಸಕ್ತರ ಗಮನ ಸೆಳೆಯಿತು. ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿದ್ದ 60 ಕ್ಕೂ ಹೆಚ್ಚು ಹಿರಿಯ ಹಾಗೂ ಪ್ರತಿಭಾನ್ವಿತ ಯುವ ಕವಿಗಳು ಸ್ವರಚಿತ ಕವನ ವಾಚಿಸಿದರು. ಹಿರಿಯ ಸಾಹಿತಿ ಮಂಜು ಕೋಡಿಉಗನೆ ಅಧ್ಯಕ್ಷತೆ ವಹಿಸಿದ್ದರು, ಖ್ಯಾತ ಕಥೆಗಾರ ಹನೂರು ಚೆನ್ನಪ್ಪ ಆಶಯ ನುಡಿಗಳನ್ನಾಡಿದರು. ಬಳಿಕ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರೊಂದಿಗೆ ಸಂವಾದ ನಡೆಯಿತು.