ಜಿಲ್ಲೆ

ಮನಸ್ಸಿಗೆ ಮುದ ನೀಡಲಿರುವ ಗೀತಗಾಯನ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಗೀತಗಾಯನ ಮನಸ್ಸಿಗೆ ಮುದ ನೀಡುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಮಂಜುನಾಥ ಪ್ರಸನ್ನ ಹೇಳಿದರು.

ಚೇತನ ಕಲಾವಾಹಿನಿ, ಕನ್ನಡ ಸುಗಮ ಸಂಗೀತ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಸಂಜೆ ನಗರದ ಚಾಮರಾಜೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಗೀತಾ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಷಾಢ ಮಾಸದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ. ಆದರೆ ಚಾಮರಾಜನಗರದಲ್ಲಿ ಚಾಮರಾಜೇಶ್ವರಸ್ವಾಮಿ ರಥೋತ್ಸವ ವಿಶೇಷವಾಗಿ ಆಷಾಢಮಾಸದಲ್ಲಿ ನಡೆಯಲಿದೆ. ಹೊಸದಾಗಿ ಮದುವೆಯಾದ ನವ ಜೋಡಿಗಳು ಜಾತ್ರೆಯಲ್ಲಿ ಭಾಗವಹಿಸಿ ತೇರಿಗೆ ಹಣ್ಣುದವನ ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಯಾಗಲಿ ಎಂದು ಬೇಡಿಕೊಳ್ಳುವುದು ಮತ್ತೊಂದು ವಿಶೇಷ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ, ಚಾಮರಾಜೇಶ್ವರ ರಥೋತ್ಸವ ಎಲ್ಲರಿಗೂ ಸಂತಸ ಉಂಟು ಮಾಡಿದೆ. ಜಿಲ್ಲೆಯು ಜಾನಪದ ತವರೂರಾಗಿದೆ ಎಂದರು. ಚಾಮರಾಜೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ.ವಿ.ವೆಂಕಟನಾಗಪ್ಪಶೆಟ್ಟಿ ಮಾತನಾಡಿ, ಚೇತನವಾಹಿನಿ ಸಂಸ್ಥೆಯು ಪ್ರತಿವರ್ಷದಂತೆ ಈ ವರ್ಷವೂ ಕೂಡ ಗಾಯನದ ಮೂಲಕ ಭಕ್ತರಿಗೆ ಸಂಗೀತ ರಸದೌತಣ ಬಡಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆಯ ಮೈಸೂರು ವಿಭಾಗದ ಸಹಾಯಕ ಕಿರಿಯ ಇಂಜಿನಿಯರ್ ಪಿ.ಲತಾ ಅವರನ್ನು ಸನ್ಮಾನಿಸಲಾಯಿತು. ಚುಡಾ ಅಧ್ಯಕ್ಷ ಮಹಮದ್‌ಅಸ್ಗರ್, ಸಮಾಜ ಸೇವಕ ಶಾಂತಿಪ್ರಸಾದ್, ಬಂಗಾರಸ್ವಾಮಿ, ಗಾಯಕರಾದ ಚೇತನಾ, ಕಲಾವಾಹಿನಿ ಅಧ್ಯಕ್ಷ ಜಿ.ರಾಜಪ್ಪ, ಬಸವರಾಜು, ಹರದನಹಳ್ಳಿ ನಟರಾಜು, ಲತಾ ಪುಟ್ಟಸ್ವಾಮಿ, ಎಂ.ಮಂಜುನಾಥ್, ಜಿ.ಬಿ.ರಾಜೇಶ್ ಇದ್ದರು.