ಜಿಲ್ಲೆ

ಆ.1ರಿಂದ ಅನಿರ್ದಿಷ್ಟಾವಧಿ ಧರಣಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ; ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದವರು ವಾಸಿಸುವ ಹಾಡಿ ಜನರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಆದಿವಾಸಿ ಹಿತರಕ್ಷಣಾ ಹೋರಾಟ ಸಮಿತಿ ಆ.1ರಿಂದ ನಗರದ ಜಿಲ್ಲಾಡಳಿ ಭವನದ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಿದೆ ಎಂದು ಸಮಿತಿ ಅಧ್ಯಕ್ಷ ನಾಗೇಂದ್ರ ಗಾಣಿಗ ಮಂಗಲ ತಿಳಿಸಿದರು.

ಅಂದು ಜಿಲ್ಲೆಯ ಹಾಡಿಗಳ ಜನರು, ಪ್ರಗತಿಪರ ಸಂಘಟನೆಗಳ ಮುಖಂಡರೊಂದಿಗೆ ನಗರದ ಜಿಲ್ಲಾಡಳಿತ ಭವನದ ಎದುರು ಸಂಜೆ 6 ಗಂಟೆಗೆ ಸಂವಿಧಾನ ಪೀಠಿಕೆ ಓದುವುದು, ಪಂಜಿನ ಮೆರವಣಿಗೆಯೊಂದಿಗೆ ಧರಣಿ ಆರಂಭಿಸಲಾಗುವುದು. ಈ ಧರಣಿಯಲ್ಲಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದವರು 148 ಕಾಲನಿಗಳಲ್ಲಿ ವಾಸವಾಗಿದ್ದು, ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಜೀವನ ಸಾಗಿಸಲು ತೊಂದರೆ ಇರುವ ಕಾರಣದಿಂದ ಹಾಡಿಯ ಕುಟುಂಬ ವಲಸೆ ಹೋಗುತ್ತಿವೆ ಎಂದರು.

18 ಹಾಡಿಗಳಲ್ಲಿ ವಿದ್ಯುತ್ ಸೌಲಭ್ಯವಿಲ್ಲ. ಜಿಲ್ಲೆಯ ಹಾಡಿಗಳಲ್ಲಿ 2 ಸಾವಿರ ಕುಟುಂಬಗಳಿಗೆ ರೇಷನ್ ಕಾರ್ಡ್ ಇಲ್ಲ. ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನ ಸಿಗುತ್ತಿಲ್ಲ. ಹನೂರು ಮತ್ತು ಕೊಳ್ಳೇಗಾಲ ತಾಲೂಕಿನ ಒಟ್ಟು 1,463 ಜನರಿಗೆ ಅರಣ್ಯ ಹಕ್ಕು ಪತ್ರಗಳನ್ನು ನೀಡಿರುವುದಕ್ಕೆ ಆರ್‌ಟಿಸಿ ಸಿಕ್ಕಿಲ್ಲ. ಇದರಿಂದ ಸರ್ಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ. ಅರಣ್ಯ ಇಲಾಖೆಯವರು ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು. ಜಿಲ್ಲಾ ಆದಿವಾಸಿಗಳ ಹಿತರಕ್ಷಣಾ ಹೋರಾಟ ಸಮಿತಿ ಕಾರ್ಯದರ್ಶಿ ಗಿರೀಶ್, ಸದಸ್ಯ ಮುರುಘ, ಸಿದ್ದರಾಜು, ನಂಜುಂಡ, ಮಹದೇವಸ್ವಾಮಿ, ಪ್ರವೀಣ್ ಸುದ್ದಿಗೋಷ್ಠಿಯಲ್ಲಿದ್ದರು.