ಜಿಲ್ಲೆ

ಪತ್ರಕರ್ತರ ಸಂಘಕ್ಕೆ ಶೀಘ್ರವೇ ನಿವೇಶನ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಪತ್ರಕರ್ತರು ಮತ್ತು ಕುಟುಂಬದವರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.

ನಗರದ ದೀನಬಂಧು ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ 100 ಮೀಟರ್ ಓಟದ ಸ್ಪರ್ಧೆ, ಮಡಕೆ ಒಡೆಯುವುದು, ಬಾಲ್ ಇನ್ ದ ಬಕೆಟ್, ಗುಂಡು ಎಸೆತ, ಲೆಮನ್ ಇನ್ ದ ಸ್ಪೂನ್, ಮ್ಯೂಸಿಕಲ್ ಚೇರ್, ಕೆರೆ ದಡ, ಕ್ರಿಕೆಟ್ ಆಟೋಟಗಳಲ್ಲಿ ಪತ್ರಕರ್ತರು ಮತ್ತು ಕುಟುಂಬದ ಸದಸ್ಯರು ಭಾಗವಹಿಸಿ ಸಂಭ್ರಮಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಗುಂಡು ಎಸೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಬೆಳೆಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಪತ್ರಕರ್ತರ ಮಕ್ಕಳು ಚೆನ್ನಾಗಿ ಓದಬೇಕು. ಪತ್ರಕರ್ತರ ಸಂಘದ ನಿವೇಶನಕ್ಕೆ ಜಾಗ ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಜತೆಯಲ್ಲಿ ಚರ್ಚಿಸಿ ಸದ್ಯದಲ್ಲಿಯೇ ನಿವೇಶನ ವ್ಯವಸ್ಥೆ ಮಾಡಲಾಗುವುದು ಎಂದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ ಮಾತನಾಡಿ, ಪತ್ರಕರ್ತರು ಹಾಗೂ ಪೊಲೀಸರ ಕೆಲಸ ಬಹುತೇಕ ಒಂದೇ ರೀತಿ ಇದೆ. ಇಬ್ಬರೂ ಕೂಡ ಸದಾ ಒತ್ತಡದಲ್ಲಿರುತ್ತೇವೆ. ಯಾವಾಗ ಏನಾಗುತ್ತದೆ ಎನ್ನುವುದು ಹೇಳಲಾಗುವುದಿಲ್ಲ. ಸದಾಕಾಲ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ದೇವರಾಜ ಕಪ್ಪಸೋಗೆ ಮಾತನಾಡಿ, ಜಿಲ್ಲೆಯು ಕ್ರೀಡೆಯಲ್ಲಿ ಹಿಂದುಳಿದಿದೆ. ಜನಪ್ರತಿನಿಧಿಗಳಿಗೆ ಕ್ರೀಡಾ ಇಚ್ಛಾಶಕ್ತಿ ಇಲ್ಲ. ಇಲ್ಲಿನ ಮಕ್ಕಳು ಜಿಲ್ಲಾ, ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಡಿವೈಎಸ್‌ಪಿ ಲಕ್ಷ್ಮಯ್ಯ, ಸಂಘದ ಕಾರ್ಯದರ್ಶಿ ಲಕ್ಕೂರು ಪ್ರಸಾದ್ ಹಾಗೂ ಪತ್ರಕರ್ತರು ಭಾಗವಹಿಸಿದ್ದರು.