ಜಿಲ್ಲೆ

ಸಿಎಂ ರಾಜೀನಾಮೆಗೆ ರೈತರ ಒತ್ತಾಯ

ಚಾಮರಾಜನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರೈತರ ಸಂಘದವರು ಸಲ್ಲಿಸಿದ ಮನವಿ ಪತ್ರಗಳನ್ನು ಬಿಸಾಡಿ ಹೋಗಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಹೇಳಿದರು.

ರೈತ ಚೇತನ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಶಿಷ್ಯ ಎಂದು ಹೇಳಿಕೊಂಡು, ರೈತ ಸಂಘದಿಂದ ಬಂದು, ಬೆಳೆದು ರೈತರ ಮನವಿ ಪತ್ರಗಳನ್ನೇ ಬಿಸಾಡಿ ಹೋಗಿರುವುದಕ್ಕೆ ರಾಜೀನಾಮೆ ನೀಡಬೇಕು ನಿದ್ದೆಯಲ್ಲಿರುವ ಸಚಿವ ಕೆ.ವೆಂಕಟೇಶ್‌ಗೆ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರೈತರು ಸಲ್ಲಿಸಿದ ಅರ್ಜಿಗಳಲ್ಲಿ ಅಧಿಕಾರಿಗಳ ವೈಲ್ಯ, ಆಡಳಿತ ವ್ಯವಸ್ಥೆಯ ಲೋಪಗಳನ್ನು ಉಲ್ಲೇಖ ಮಾಡಲಾಗಿತ್ತು. ಈ ಅಕ್ರಮಗಳು ಬೆಳಕಿಗೆ ಬಂದರೆ ಎಲ್ಲಿ ಸಮಸ್ಯೆಯಾಗುತ್ತದೆಯೋ ಎಂದು ಮನವಿ ಪತ್ರಗಳನ್ನು ಬಿಸಾಡಿ ಹೋಗಿದ್ದಾರೆ. ಮುಡಾ ಹಗರಣದಲ್ಲಿ ಬಹುಕೋಟಿ ರೂ. ಅವ್ಯವಹಾರದ ಸಂಬಂಧ ಸಿಎಂ ಸಿದ್ದರಾಮಯ್ಯ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಹೆಗ್ಗೋಠಾರ ವಿಜಯ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಮೇಲಾಜಿಪುರಕುಮಾರ್, ರೈತ ಮುಖಂಡ ಕುಂತೂರು ನಂಜುಂಡಸ್ವಾಮಿ ಇದ್ದರು.