ಚಾಮರಾಜನಗರ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದು ಹಾಲಿ ಅಧ್ಯಕ್ಷ, ಸ್ಪರ್ಧಿ ಮೂಡ್ಲಪುರ ನಂದೀಶ್‌ಗೆ ಬೆಂಬಲ ನೀಡುತ್ತಿದ್ದೇನೆ ಎಂದು ಆಲೂರು ಮಲ್ಲು ತಿಳಿಸಿದರು.
ನಾನು ಮಹಾಸಭಾದ ಅಧ್ಯಕ್ಷನಾಗಬೇಕೆಂದು ಬಯಸಿ ನಾಮಪತ್ರ ಸಲ್ಲಿಸಿದ್ದೆ. ಆದರೆ ಹಾಲಿ ಅಧ್ಯಕ್ಷ ಮೂಡ್ಲುಪುರ ನಂದೀಶ್ ಮತ್ತೊಂದು ಅವಕಾಶವನ್ನು ನೀಡಿ. ಈಗಾಗಲೇ ಪ್ರಗತಿಯಲ್ಲಿರುವ ಬಸವ ಭವನ, ಬಸವೇಶ್ವರ ಪುತ್ಥಳಿ ನಿರ್ಮಾಣ ಸೇರಿದಂತೆ ಅನೇಕ ಕಾರ್ಯಕ್ರಮಗಳು ಚಾಲ್ತಿಯಲ್ಲಿವೆ. ಇವೆಲ್ಲವನ್ನು ಪೂರ್ಣಗೊಳಿಸಲು ಮತ್ತೊಂದು ಅವಕಾಶ ಕೊಡುವಂತೆ ಕೇಳಿಕೊಂಡರು. ಅದರಂತೆ ಕಣದಿಂದ ಹಿಂದೆ ಸರಿದು ಅವರಿಗೆ ಸಂಪೂರ್ಣ ಬೆಂಬಲ ನೀಡುವ ಜತೆಗೆ ಐದು ತಾಲೂಕುಗಳಲ್ಲಿ ಅವರ ಪರ ಪ್ರಚಾರ ಮಾಡಿ, ನನ್ನ ಬೆಂಬಲಿಗರ ಮತಗಳನ್ನು ಕೊಡಿಸಿ, ಅವರ ಗೆಲುವಿಗೆ ಹಗಲಿರುಳು ಶ್ರಮಿಸುವುದಾಗಿ ತಿಳಿಸಿದರು.
ಮಹಾಸಭಾದ ಅಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಈಗಾಗಲೇ ಮೂರು ವರ್ಷದ ಅವಧಿಗೆ ಅಧ್ಯಕ್ಷನಾಗಿ ಉತ್ತಮ ಸೇವೆ ಸಲ್ಲಿಸಿದ್ದೇನೆ. ನಾನು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಕೋವಿಡ್-19 ವ್ಯಾಪಕವಾಗಿ ಹಬ್ಬಿತ್ತು. ಎರಡು ವರ್ಷಗಳ ಕಾಲ ಕೋವಿಡ್ ಸಂತ್ರಸ್ತರಿಗೆ ನೆರವು, ಕೋವಿಡ್‌ನಿಂದ ಮೃತಪಟ್ಟ 500ಕ್ಕೂ ಹೆಚ್ಚು ಮಂದಿಯನ್ನು ಅಂತ್ಯಕ್ರಿಯೆ ಮಾಡಿ, ಭಿಕ್ಷಕರು ಹಾಗೂ ದೂರದ ಊರುಗಳಿಂದ ಬಂದಿದ್ದವರಿಗೆ ಊಟದ ವ್ಯವಸ್ಥೆ ಮಾಡಿ, ಮಾನವೀಯ ಸೇವೆಯನ್ನು ಸಲ್ಲಿಸಿದ್ದೇನೆ. ನಂತರ ಸಿಕ್ಕ ಒಂದು ವರ್ಷದ ಅವಧಿಯಲ್ಲಿ ನೆನಗುದಿಗೆ ಬಿದ್ದಿದ್ದ ಬಸವ ಭವನ ನಿರ್ಮಾಣ, ಬಸವ ಪುತ್ಥಳಿಗೆ ನಿರ್ಮಾಣ ಚಾಲನೆ ಹಾಗೂ ಬಸವ ಭವನದ ಆಸ್ತಿ ವಿಚಾರ ನ್ಯಾಯಾಲಯದಲ್ಲಿದ್ದು, ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಹೋರಾಟ ಮಾಡಿದ್ದೇನೆ. ಈಗ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಪೂರ್ಣಗೊಳಿಸುವುದು, ಸಮುದಾಯದ ಅಭಿವೃದ್ದಿಗೆ ಮತ್ತೊಂದು ಅವಕಾಶವನ್ನು ನೀಡಬೇಕೆಂದು ಮನವಿ ಮಾಡಿದರು.
ಮಹಾಸಭಾದ ಮಾಜಿ ಅಧ್ಯಕ್ಷ ಕೋಡಸೋಗೆ ಶಿವಬಸಪ್ಪ ಮಾತನಾಡಿ, ಕಳೆದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿರುವ ಮೂಡ್ಲುಪುರ ನಂದೀಶ್ ಅವರಿಗೆ ಸಮಾಜದ ಬಂಧುಗಳು ಮತ್ತೊಂದು ಅವಕಾಶ ನೀಡಬೇಕು. ಅವರ ಅವಧಿಯಲ್ಲಿ ಸಮಾಜದ ಸಂಘಟನೆ ಹಾಗೂ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಸಮಾಜದ ಯಾವುದೇ ವಿಚಾರ ಬಂದರು ಪೊಲೀಸ್ ಠಾಣೆ, ಅಸ್ಪತ್ರೆ, ಸರ್ಕಾರಿ ಇಲಾಖೆಗಳು ಹಾಗೂ ಗ್ರಾಮಗಳಿಗೆ ತೆರಳಿ ಅವರಿಗೆ ಧೈರ್ಯ ತುಂಬಿ, ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದ್ದಾರೆ. ಇಂಥವರಿಗೆ ಅವಕಾಶ ನೀಡಿದರೆ, ಇನ್ನು ಹೆಚ್ಚಿನ ಸೇವೆ ಮಾಡಲು ಸಿದ್ದರಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ರಾಜಶೇಖರಮೂರ್ತಿ, ನಾಗನತ್ತ ಗುರುಮಲ್ಲಪ್ಪ, ಮುಖಂಡರಾದ ಭೃಂಗೇಶ್ ಕಟ್ಟೆ, ಬಸವನಪುರದ ಗೌಡಿಗೆ ರೇವಣ್ಣಸ್ವಾಮಿ ಇತರರು ಇದ್ದರು.