ಜಿಲ್ಲೆ

ಆಸ್ಪತ್ರೆ ಕೆಲ್ಸಕ್ಕೆ ಒಲ್ಲದ ಸಂತ್ರಸ್ತ ಮನಸ್ಸು

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಬದುಕು ಕಳೆದುಕೊಂಡ ವಾತಾವರಣದಲ್ಲೇ ಮತ್ತೆ ಬದುಕು ಕಟ್ಟಿಕೊಳ್ಳಲು ದುಡಿಯಬೇಕಾದ ನೋವಿನ ಭಾವನೆ, ಒಲ್ಲದ ಮನಸ್ಸಿನಲ್ಲಿ ಆಕ್ಸಿಜನ್ ದುರಂತದ ಸಂತ್ರಸ್ತರಿದ್ದಾರೆ.

ಕೋವಿಡ್ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಸೋಂಕಿತರು ಆಮ್ಲಜನಕ ಸಿಗದೆ ನಗರದ ಹೃದಯಭಾಗದಲ್ಲಿದ್ದ ಆಸ್ಪತ್ರೆಯಲ್ಲಿ ಮೃತಪಟ್ಟರು. ಇವರ ಕುಟುಂಬಸ್ಥರಿಗೆ ರಾಜ್ಯ ಸರ್ಕಾರ ಕಾಯಂ ಉದ್ಯೋಗದ ಭರವಸೆ ನೀಡಿದೆ. ಈ ಆಶ್ವಾಸನೆ ಈಡೇರುವವರೆಗೂ ಸಂತ್ರಸ್ತರು ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ರಾಜ್ಯ ಸರ್ಕಾರ ಸೂಚಿಸಿರುವ ಸ್ಥಳವೇ ನಗರದ ಹೊರವಲಯದಲ್ಲಿರುವ ಜಿಲ್ಲಾಸ್ಪತ್ರೆ(ಸಿಮ್ಸ್).

ಕೋವಿಡ್ ಎಂದ ಕೂಡಲೇ ಪ್ರತಿಯೊಬ್ಬರಿಗೂ ನೆನಪಾಗುವುದು ಆಕ್ಸಿಜನ್ ದುರಂತ ಮತ್ತು ಜಿಲ್ಲಾ ಕೋವಿಡ್ ಆಸ್ಪತ್ರೆ. ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಯಾವುದೇ ಆಸ್ಪತ್ರೆಗಳನ್ನು ನೋಡಿದರೂ ಕಾಡುವುದೊಂದೇ ತನ್ನವರನ್ನು ಕಳೆದುಕೊಂಡ ನೋವು. ಸಂತ್ರಸ್ತರ ಕಣ್ಣೀರು, ಮತ್ತೆ ಮತ್ತೆ ಜಿನುಗುವಂತೆ ಮಾಡಬಲ್ಲ ಕೆಟ್ಟ ನೆನಪನ್ನು ಹೊತ್ತು ತರಬಲ್ಲ ಶಕ್ತಿ ಆಸ್ಪತ್ರೆಗಿದೆ. ಬದುಕಿ ಬಾಳಿ ಹೋಗುವವರಿಗೆ ಕಟ್ಟಿಸಿದ ೋರಿಗಳ ಮೇಲೆ ಕುಟುಂಬಸ್ಥರು ಹೂವನಿಟ್ಟು ಪೂಜೆ ಮಾಡುತ್ತಾರೆ. ಆದರೆ ಆಡಳಿತ ವ್ಯವಸ್ಥೆಯ ಲೋಪಕ್ಕೆ ಬದುಕಿ ಬಾಳಬೇಕಿದ್ದವರು ಬಲಿಯಾದರೆ ಅಂತಹ ಜಾಗ ಮತ್ತು ವಾತಾವರಣದಲ್ಲಿ ಸಂತ್ರಸ್ತರು ಕೆಲಸ ಮಾಡಬೇಕಾಗಿರುವುದು ಮಾನಸಿಕತೆಗೆ ಒಡ್ಡಿಕೊಳ್ಳಬೇಕಾಗಿರುವ ಸವಾಲಾಗಿದೆ.

ಬದುಕಿನ ಅನಿವಾರ್ಯತೆಗೆ ಸಿಲುಕಿರುವ ಒಂದಿಬ್ಬರು ಈ ಸವಾಲನ್ನು ಸ್ವೀಕಾರ ಮಾಡಿದ್ದಾರೆ. ಇಬ್ಬರು ಆಸ್ಪತ್ರೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಇವರಂತೆಯೇ ಉಳಿದವರೂ ಕೆಲಸಕ್ಕೆ ಹೋಗಬಹುದಲ್ಲವೇ?, ಇವರಿಗೇನು ಮನೆ ಮುಂದೆಯೇ ಕೆಲಸ ಕೊಡಲು ಆಗುತ್ತಾ? ಎಂದು ಪ್ರಶ್ನೆ ಹಾಕುವವರು ಒಮ್ಮೆ ತಮ್ಮ ಮನೆಯಲ್ಲಿ ಸತ್ತು ಹೋದವರು, ಅವರು ಸತ್ತ ಜಾಗ ಅಂತಹದ್ದೇ ವಾತಾವರಣದಲ್ಲಿ ತಾವು ಓಡಾಡುವಾಗ ಆಗುವ ನೋವಿನಲ್ಲಿ ಉತ್ತರ ಕಂಡುಕೊಳ್ಳಬೇಕಾಗಿದೆ.

ಸಂತ್ರಸ್ತರಲ್ಲಿ ಕೆಲವರು ತಾವು ಆಸ್ಪತ್ರೆಯಲ್ಲಿ ಕೆಲಸಕ್ಕೆ ಹೋಗುವುದಿಲ್ಲ ಎನ್ನುತ್ತಿದ್ದಾರೆ. ಈ ಹಿಂದೆ ಬೇರೆ ಬೇರೆ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರಿ ಮಾಡುತ್ತಿದ್ದವರಿಗೆ ಇನ್ನು ಮುಂದೆ ನೀವು ಜಿಲ್ಲಾಸ್ಪತ್ರೆಯಲ್ಲಿ ಕೆಲಸಕ್ಕೆ ಹೋಗಿ ಎಂದಿದ್ದಕ್ಕೆ ಕೆಲವರು ಕೆಲಸಕ್ಕೆ ಬರಲ್ಲ ಎನ್ನುತ್ತಿದ್ದಾರೆ.
ಜಿಲ್ಲಾಡಳಿತದೊಳಗೆ ಮಾತೃ ಹೃದಯವಿದೆ. ಈ ಹೃದಯ ಮಿಡಿದರೆ ಆಸ್ಪತ್ರೆ ಬದಲು ಖಾಲಿ ಇರುವ ಬೇರೆ ಬೇರೆ ಇಲಾಖೆಗಳಲ್ಲಿ ಕೆಲಸ ಕೊಡಬಹುದು. ಈಗಾಗಲೇ ಸಂತ್ರಸ್ತರಿಗೆ ಬೇರೆ ಇಲಾಖೆಗಳಲ್ಲಿ ಕೆಲಸ ಕೊಡಲಾಗಿತ್ತು. ಆದರೆ ತಿಂಗಳಿಗೆ ಸರಿಯಾಗಿ ಸಂಬಳ ಕೊಡಲಾಗಿಲ್ಲ. ಇಂತಹ ಪ್ರಮಾದಗಳಿಂದ ತಪ್ಪಿಸಿಕೊಳ್ಳಲು ಮುಂದಾಗಿರುವ ಜಿಲ್ಲಾಡಳಿತದ ಮಾತೃ ಹೃದಯ ಮಿಡಿಯುತ್ತಿಲ್ಲ. ಸರ್ಕಾರದ ಸೂಚನೆಯಂತೆ ಎಲ್ಲರೂ ಜಿಲ್ಲಾಸ್ಪತ್ರೆಯಲ್ಲೇ ಕೆಲಸ ಮಾಡಬೇಕೆಂದು ಸೂಚನೆ ನೀಡುತ್ತಿದೆ. ರಾಜ್ಯ ಸರ್ಕಾರ ನೀಡಿರುವ ಸರ್ಕಾರಿ ಉದ್ಯೋಗದ ಭರವಸೆ ಈಡೇರಬೇಕೆಂದರೆ ಸದ್ಯಕ್ಕೆ ಆಸ್ಪತ್ರೆಯಲ್ಲಿ ಕೊಟ್ಟಿರುವ ಕೆಲಸವನ್ನು ಮಾಡಬೇಕೆಂಬ ಮಾತು ಸಂತ್ರಸ್ತರಿಗೆ ಷರತ್ತಿನಂತೆ ಭಾಸವಾಗುತ್ತಿದೆ.

ಖಾತೆಗೆ ಜಮೆಯಾಗುತ್ತಿದ್ದ ಪುಣ್ಯ ಖೋತಾ
ಕಣ್ಣೀರಿನಲ್ಲಿ ‘ಕೈ’ತೊಳೆಯುತ್ತಿರುವ ಆಕ್ಸಿಜನ್ ದುರಂತದ ಸಂತ್ರಸ್ತೆಯರ ಸಂಕಟ ರಾಜ್ಯ ಮಹಿಳಾ ಆಯೋಗದ ಕಿವಿಗೆ ಮುಟ್ಟಿದೆ. ಕಳೆದ ಎರಡು ದಿನಗಳಿಂದ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿಗೆ ಸಂತ್ರಸ್ತೆಯರ ಪರಿಸ್ಥಿತಿಯನ್ನು ‘ವಿಜಯವಾಣಿ’ ವಿವರಿಸಿದ್ದು, ತಕ್ಷಣ ಇದಕ್ಕೆ ಸ್ಪಂದಿಸಿರುವ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌ಗೆ ಸೂಚನೆ ನೀಡಿದ್ದಾರೆ.
ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ ಮಹಿಳೆಯರು, ಸಂತ್ರಸ್ತೆಯರ ವಿವರನ್ನು ನೀಡಲು ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ನಿರ್ದೇಶನ ನೀಡಿದ್ದಾರೆ. ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ(ಹಳೇ ಆಸ್ಪತ್ರೆ) ಗುರುವಾರ ಭೇಟಿ ನೀಡಿದ್ದ ವೇಳೆ ಉಪ ನಿರ್ದೇಶಕ ಮಂಜುನಾಥ್‌ಗೆ ಸೂಚನೆ ನೀಡಿ, ಅವರ ಹೆಸರು, ಮನೆ ವಿಳಾಸ, ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯ ಮತ್ತು ಇತರೆ ಮಾಹಿತಿಗಳನ್ನು ಸಂಗ್ರಹಿಸಿ ಕೊಡಲು ತಿಳಿಸಿದರು.
ಇದಾದ ಬಳಿಕ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಡಾ.ನಾಗಲಕ್ಷ್ಮೀ ಚೌಧರಿ ಸುದ್ದಿಗೋಷ್ಠಿ ನಡೆಸಿದ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರಿಂದ ಸಂತ್ರಸ್ತರ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಉಪನಿರ್ದೇಶಕ ಮಂಜುನಾಥ್ ವಿಜಯವಾಣಿಗೆ ತಿಳಿಸಿದ್ದಾರೆ. ಹೀಗಾಗಿ ಇವರಿಗೆ ಕೊಟ್ಟಿದ್ದ ಸೂಚನೆ ಎಡಿಸಿ ಮೂಲಕ ಪಾಲನೆಯಾಗಿಬಿಟ್ಟಿರುವುದರಿಂದ ಇವರೇನು ತಲೆಕೆಡಿಸಿಕೊಳ್ಳುವುದಿಲ್ಲ ಎನ್ನುವಂತಿದೆ.
ಸಂತ್ರಸ್ತ ಮಹಿಳೆಯರ ಸಂಕಷ್ಟ, ಸರ್ಕಾರಿ ಉದ್ಯೋಗಕ್ಕಾಗಿ ನಡೆಸುತ್ತಿರುವ ಹೋರಾಟ, ಮನೆಯಲ್ಲಿರುವ ಪರಿಸ್ಥಿತಿ, ಮಕ್ಕಳನ್ನು ಸಾಕಲು ಪಡುತ್ತಿರುವ ಕಷ್ಟ, ಹಾಕುತ್ತಿರುವ ಕಣ್ಣೀರನ್ನು ಅರಿತು ವರದಿ ಸಿದ್ಧಪಡಿಸಿ ಸರ್ಕಾರದ ಗಮನ ಸೆಳೆದಿದ್ದರೆ ಇಲಾಖೆ ಖಾತೆಗೆ ಪುಣ್ಯ ಜಮೆಯಾಗುತ್ತಿತ್ತು. ಈಗ ಅದು ಖೋತಾ ಆಗಿದೆ.

ಆಸ್ಪತ್ರೆ ಎಂದರೆ ನನ್ನ ಪಾಲಿಗೆ ಎಲ್ಲವೂ ಒಂದೇ. ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ ನನ್ನ ಪತಿ ಅಜಯ್ ಮೃತಪಟ್ಟರು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಮನೆಗಾಗಿ ದುಡಿಯುತ್ತಿದ್ದವರನ್ನು ಕಳೆದುಕೊಂಡೆವು. ಸೂಕ್ತ ಚಿಕಿತ್ಸೆ ಸಿಗದೆ ನನ್ನ ಪತಿ ಮೃತಪಟ್ಟಿದ್ದಕ್ಕೆ ಆಸ್ಪತ್ರೆಯನ್ನು ಇಂದಿಗೂ ಬೈದುಕೊಳ್ಳುತ್ತೇನೆ. ತಪ್ಪಿತಸ್ಥರಿಗೆ ಇನ್ನೂ ಶಿಕ್ಷೆಯೇ ಆಗಿಲ್ಲ. ಸಣ್ಣ ಪುಟ್ಟ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವವರಿಗೆ ಸೌಲಭ್ಯ ಸಿಗದೆ ಹೋದಾಗ ನನ್ನಂತೆಯೇ ಅವರೂ ಸಹ ಬೈದುಕೊಳ್ಳುತ್ತಾರೆ. ಆಗ ನನಗೆ ಕೆಲಸ ಕೊಟ್ಟಿರುವ ಆಸ್ಪತ್ರೆ ಪರವಾಗಿ ಮಾತನಾಡಲು ಮನಸ್ಸು ಒಪ್ಪುವುದಿಲ್ಲ. ಮನಸಿಟ್ಟು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.
ನಾಗರತ್ನ ಆಕ್ಸಿಜನ್ ದುರಂತದ ಸಂತ್ರಸ್ತೆ