ಜಿಲ್ಲೆ

ಪುರಾಣಿ ಪೋಡಿಗೆ ಜಿಲ್ಲಾಧಿಕಾರಿ ಭೇಟಿ

ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿರುವ ಪುರಾಣಿ ಪೋಡಿಗೆ ಜಿಲ್ಲಾಧಿಕಾರಿ ಶಿಲ್ಪನಾಗ್ ಗುರುವಾರ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಬುಧವಾರ ಭೇಟಿ ನೀಡಿದ್ದಾಗ ಇಲ್ಲಿನ ನಿವಾಸಿಗಳು ರಸ್ತೆ, ಕುಡಿಯುವ ನೀರು, ವಿದ್ಯುತ್ ಹಾಗೂ ಇಲ್ಲಿರುವ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಹಾಲು ನೀಡುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಭೇಟಿ ನೀಡಿದ್ದರು.

ಈ ವೇಳೆ ಸೆಸ್ಕ್ ಎಇಇ ಲಿಂಗರಾಜು ಇಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು 1.06 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಲಾಗಿದೆ. ಇದಕ್ಕೆ ಆದಷ್ಟು ಬೇಗ ಅರಣ್ಯ ಇಲಾಖೆಯ ಅನುಮತಿ ಲಭಿಸುವ ಸಾಧ್ಯತೆಗಳಿದ್ದು, ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.

ಆದಷ್ಟು ಬೇಗ ಕಾಮಗಾರಿಯನ್ನು ಆರಂಭಿಸಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಇಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೂ ಆದಷ್ಟು ಬೇಗ ಕಾಮಗಾರಿ ಕೈಗೊಳ್ಳಿ, ಅರಣ್ಯ ಇಲಾಖೆ ಯಾವುದೇ ಕಾರಣಕ್ಕೂ ವಿನಾ ಕಾರಣ ಇಲ್ಲಿನ ನಿವಾಸಿಗಳಿಗೆ ತೊಂದರೆ ಕೊಡಬಾರದು. ಮೂಲ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಗಳು ನಡೆಸುವ ಕಾಮಗಾರಿಯನ್ನು ತಡೆಯಬಾರದು. ನರೇಗಾ ಯೋಜನೆಯಡಿ ಕಾಮಗಾರಿಯನ್ನು ಇಲ್ಲಿನ ವಾಸಿಗಳಿಗೆ ನೀಡಿ ಇದಕ್ಕೆ ಸಂಬಂಧಪಟ್ಟಂತೆ ಕೆಲಸವನ್ನು ಮಂಜೂರು ಮಾಡಿಸಿಕೊಡುವ ಜವಾಬ್ದಾರಿಯನ್ನು ನಾನು ವಹಿಸುತ್ತೇನೆ ಎಂದು ಪಿಡಿಒ ಕಾವ್ಯಾಗೆ ಸೂಚನೆ ನೀಡಿದರು.

ಇಲ್ಲಿನ ಆಶ್ರಮ ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ಹಾಲು ನೀಡುತ್ತಿಲ್ಲ ಎಂಬ ದೂರು ಬಂದಿದ್ದು, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಮಕ್ಕಳಿಗೆ ನೀಡಬೇಕು. ಮೆನು ಪ್ರಕಾರ ಆಹಾರವನ್ನು ನೀಡಬೇಕು ಇಲ್ಲವಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಬುಡಕಟ್ಟು ಅಧಿಕಾರಿ ಮಂಜುಳಾ, ತಹಸೀಲ್ದಾರ್ ಜಯಪ್ರಕಾಶ್, ಆರ್‌ಎಫ್‌ಒ ವಾಸು, ಸಮಾಜ ಕಲ್ಯಾಣಾಧಿಕಾರಿ ಕೇಶವಮೂರ್ತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.