ಜಿಲ್ಲೆ

ಕಾಂಗ್ರೆಸ್ಸಿಗರ ವೈಯಕ್ತಿಕ ತೇಜೋವಧೆಯಿಂದ ಸೋತೆ

ಕಿರಣ್ ಮಾದರಹಳ್ಳಿ

ಚಾಮರಾಜನಗರ : ಲೋಕಸಭಾ ಚುನಾವಣಾ ಆರಂಭಕ್ಕೂ ಮುನ್ನವೇ ಬಿಜೆಪಿ ವಿರುದ್ಧ ಕಾಂಗ್ರೆಸ್ಸಿಗರು ಮಾಡಿದ ನಿರಂತರ ಅಪಪ್ರಚಾರ ಹಾಗೂ ವೈಯಕ್ತಿಕ ತೇಜೋವಧೆ ಮಾಡಿದ ಸಚಿವ ಎಚ್.ಸಿ.ಮಹದೇವಪ್ಪ ನನ್ನ ಸೋಲಿಗೆ ಕಾರಣರಾಗಿದ್ದಾರೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಮಾಜಿ ಶಾಸಕ ಎಸ್.ಬಾಲರಾಜು ಆರೋಪಿಸಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಿಜೆಪಿಗೆ ಕ್ಷೇತ್ರದಲ್ಲಿ ಗೆಲ್ಲುವ ಎಲ್ಲ ವಾತಾವರಣ ಇತ್ತು. ಆದರೆ, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ.ಮಹದೇವಪ್ಪ ತನ್ನ ಮಗನನ್ನು ಗೆಲ್ಲಿಸಿಕೊಳ್ಳುವುದಕ್ಕಾಗಿ ಮತ್ತೊಬ್ಬ ದಲಿತ ನಾಯಕನಿಗೆ ಅನ್ಯಾಯ ಮಾಡಿ, ಬೆನ್ನಿಗೆ ಚೂರಿ ಹಾಕಿದ್ದಾರೆ. ಇದು ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿದ್ದು, ಕುಟುಂಬ ಹಾಗೂ ಪುತ್ರ ವ್ಯಾಮೋಹಕ್ಕೆ ಬಲಿಯಾಗಿದ್ದಾರೆಯೇ ಹೊರತು ಯಾವುದೇ ಅಂಬೇಡ್ಕರ್ ತತ್ವ, ಸಿದ್ಧಾಂತವು ಅವರಲ್ಲಿ ಎಳ್ಳಷ್ಟೂ ಇಲ್ಲ ಎಂದರು.

ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಕಲ್ಯಾಣ ನಿಧಿಯ 250 ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಾಗ ಮಹದೇವಪ್ಪ ಅವರಿಗೆ ದಲಿತರ ಮೇಲಿನ ಪ್ರೀತಿ ಎಲ್ಲಿಹೋಗಿತ್ತು? ಕಾಂಗ್ರೆಸ್ ನಿರಂತರವಾಗಿ ಸಂವಿಧಾನ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಾ ಬಂದಿದೆ ಎಂದು ಕಿಡಿಕಾರಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಕಾಂಗ್ರೆಸ್‌ನವರು ಮಾಡುತ್ತಿರುವುದು ಅಭಿನಂದನಾ ಸಮಾರಂಭವಲ್ಲ, ಬದಲಾಗಿ ಎಲ್ಲ ಹಗರಣಗಳಲ್ಲಿ ಸಿಲುಕಿಕೊಂಡು ನರಳಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನವಾಗಿದೆ. ಹಗರಣ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಸಚಿವರು ಒಂದು ತಿಂಗಳ ಬಳಿಕ ಕ್ಷೇತ್ರದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬರುತ್ತಿದ್ದಾರೆ. ನೂತನ ಸಂಸದರು ಇನ್ನೂ ಸಹ ನಮ್ಮ ಕ್ಷೇತ್ರಕ್ಕೆ ಬಂದಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಸೋತಿರಬಹುದು. ಆದರೆ, ಕ್ಷೇತ್ರದ ಮತದಾರರು ಬಿಜೆಪಿಗೆ 5.50 ಲಕ್ಷ ಮತಗಳನ್ನು ನೀಡಿದ್ದಾರೆ. ಇವರ ಪರವಾಗಿ ನಾವು ಕ್ಷೇತ್ರದಲ್ಲಿ ಧ್ವನಿ ಎತ್ತಬೇಕಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಿ, ಮುಂಬರುವ ಜಿ.ಪಂ., ತಾ.ಪಂ. ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವ ಮೂಲಕ ಈ ಸೋಲಿಗೆ ತಕ್ಕ ಉತ್ತರ ನೀಡೋಣ ಎಂದರು.

ಸಭೆಯಲ್ಲಿ ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಚಾಮುಲ್ ಅಧ್ಯಕ್ಷ ವೈ.ಸಿ.ನಾಗೇಂದ್ರ, ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಜಯಸುಂದರ್, ರಾಷ್ಟ್ರೀಯ ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ನಗರ ಮಂಡಲದ ಅಧ್ಯಕ್ಷ ಶಿವರಾಜು, ಮಾಧ್ಯಮ ಪ್ರಮುಖ ವೀರೇಂದ್ರ ಹಾಜರಿದ್ದರು.