ಚಾಮರಾಜನಗರ : ಶುಭಕಾರ್ಯಗಳಿಗೆ ಕರೆದಾಗ ಹೋಗಿ ಸೋಬಾನೆ ಹಾಡುವುದು, ಜಾನಪದ ಗೀತೆಗಳ ಗಾಯನ ನಡೆಸಿಕೊಡುವುದು, ಬೀದಿ ನಾಟಕ, ಇತರ ಕಲಾ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸಂಸ್ಥೆಗೆ ಮಾದೇವನೇ ವರವಾಗಿದ್ದಾನೆ.
ನಗರದ ರಾಮಸಮುದ್ರ ಬಡಾವಣೆಯಲ್ಲಿ ಮನೆಗೊಬ್ಬರು ಜಾನಪದ ಕಲಾವಿದರು ಸಿಗುತ್ತಾರೆ. ಈ ಬಡಾವಣೆಯನ್ನು ಜಾನಪದದ ತೊಟ್ಟಿಲು ಎಂದೂ ಕರೆಯುತ್ತಾರೆ. ಅಂತಹ ರಾಮಸಮುದ್ರ ಬಡಾವಣೆಯ ದೊಡ್ಡ ಬೀದಿ ನಿವಾಸಿಯಾಗಿರುವ ಹೊನ್ನಮ್ಮ ಸೋಬಾನೆ ಪದ ಹಾಡುತ್ತಲೇ ಚಿರಪರಿಚಿತರಾಗಿದ್ದಾರೆ. ಇವರು ಕಲಾಸೇವೆಯನ್ನು ಮತ್ತಷ್ಟು ವಿಸ್ತರಿಸುವ ಮಾಡುವ ನಿಟ್ಟಿನಲ್ಲಿ 2019 ರಲ್ಲಿ ಶ್ರೀಏಳುಮಲೆ ಮಹದೇಶ್ವರ ಜನಪದ ಮತ್ತು ಸೋಬಾನೆ ಕಲಾವಿದರ ಸಂಸ್ಥೆಯನ್ನು ಪ್ರಾರಂಭಿಸಿದರು.
ದಸರಾದಲ್ಲೂ ಗಾಯನ: 5 ವರ್ಷಗಳಿಂದಲೂ ಸಂಸ್ಥೆಯ ಮೂಲಕ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ಸಂಸ್ಥೆಯಲ್ಲಿರುವ ಕಲಾವಿದರು ಮದುವೆ, ತೊಟ್ಟಿಲು ಶಾಸ ಇತರ ಶುಭಕಾರ್ಯಗಳಿಗೆ ಹೋಗಿ ಸೋಬಾನೆ ಹಾಡುತ್ತಾರೆ. ವಿವಿಧ ಕಡೆಗಳಲ್ಲಿ ಜಾನಪದ ಗಾಯನವನ್ನು ನಡೆಸಿಕೊಡುತ್ತಾರೆ. ಮೈಸೂರು ಆಕಾಶವಾಣಿ ಕಲಾವಿದೆಯೂ ಆಗಿರುವ ಹೊನ್ನಮ್ಮ ಅವರು ಮೈಸೂರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೋಬಾನೆ ಪದಗಳನ್ನು ಹಾಡಿರುವುದು ವಿಶೇಷ. ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ನಾಲಿಗೆಯಲ್ಲಿವೆ ಪದಗಳು:
ನೂರಾರು ಸೋಬಾನೆ ಪದ, ಬೀಸುಕಲ್ಲಿನ ಪದ, ಜಾನಪದ ದೈವಗಳ ಕುರಿತಾದ ಜಾನಪದ ಗೀತೆಗಳನ್ನು ನಾಲಿಗೆಯಲ್ಲಿ ತುಂಬಿಕೊಂಡಿರುವ ಹೊನ್ನಮ್ಮ ಅವರು ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇವರ ಕಲಾಸೇವೆಯನ್ನು ಗುರುತಿಸಿ ನೂರಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಪ್ರಸ್ತುತ ಶ್ರೀಏಳು ಮಲೆ ಮಹದೇಶ್ವರ ಜನಪದ ಮತ್ತು ಸೋಬಾನೆ ಕಲಾವಿದರ ಸಂಸ್ಥೆಯ ವತಿಯಿಂದ ಬೀದಿನಾಟಕ, ದೊಣ್ಣೆ ವರಸೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಜತೆಗೆ ಸಂಸ್ಥೆಯಿಂದ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಸಂಸ್ಥೆಯ ಉನ್ನತಿಗೆ ಹೊನ್ನಮ್ಮನವರ ಪುತ್ರಿ ಮತ್ತು ಸಂಸ್ಥೆಯ ಕಾರ್ಯದರ್ಶಿ ಎಸ್.ಸುಶೀಲಾ, ಕಲಾವಿದರಾದ ಪುಟ್ನಂಜಮ್ಮ, ಅಂಕಮ್ಮ, ದೇವಾಜಮ್ಮ, ದೇವಮ್ಮ, ಜ್ಯೋತಿ, ಚಿತ್ರಕಲಾ ಇತರರು ಬೆನ್ನೆಲುಬಾಗಿ ನಿಂತಿದ್ದಾರೆ.
ವಿಶೇಷ ಸೊಗಡು:
ಸುಮಾರು 40-45 ವರ್ಷಗಳಿಂದ ಸೋಬಾನೆ ಪದಗಳನ್ನು ಹೇಳಿಕೊಂಡೇ ಜೀವನ ಕ್ರಮಿಸಿದ ಹೊನ್ನಮ್ಮ, ಇದನ್ನು ತಮ್ಮ ತಾಯಿಯಿಂದ ಬಳುವಳಿಯಾಗಿ ಪಡೆದುಕೊಂಡಿದ್ದಾರೆ. ಜಮೀನಿನಲ್ಲಿ ಕೂಲಿ ಮಾಡುವ ಸಂದರ್ಭದಲ್ಲಿ ಕಲಿತುಕೊಂಡ ಸೋಬಾನೆ ಪದಗಳನ್ನು ಮದುವೆ ಶಾಸ್ತ್ರ, ತೊಟ್ಟಿಲುಶಾಸ, ಗೃಹಪ್ರವೇಶ, ಮಕ್ಕಳನ್ನು ದೇವರು ಗುಡ್ಡರಾಗಿಸುವುದು ಮೊದಲಾದ ಶುಭಕಾರ್ಯಗಳಲ್ಲಿ ತಂಡದೊಂದಿಗೆ ಹಾಡುತ್ತಾರೆ. ಬೀಸುವ ಕಲ್ಲು ಪದ, ಜೋಗಿಹಾಡು, ಶ್ರೀ ಮಲೆ ಮಹದೇಶ್ವರ, ಶ್ರೀ ಮಂಟೇಸ್ವಾಮಿ, ಸಿದ್ದಪ್ಪಾಜಿ, ಶಿವಶರಣೆ ಶಂಕಮ್ಮ, ಬಿಳಿಗಿರಿರಂಗಪ್ಪ, ಮೈದಾಳರಾಮ, ನಿಂಗರಾಜಮ್ಮ, ಜೋಗುಳಹಾಡು, ನಂಜುಂಡೇಶ್ವರ, ಚಾಮುಂಡೇಶ್ವರಿ, ಇತರ ಜಾನಪದ ದೈವಗಳ ಜಾನಪದ ಕಥೆ ಮತ್ತು ಭಕ್ತಿಗೀತೆಗಳನ್ನು ಹಾಡುತ್ತಾರೆ.
ಬೀದಿ ನಾಟಕದಲ್ಲೂ ಛಾಪು:
ಶ್ರೀಏಳುಮಲೆ ಮಹದೇಶ್ವರ ಜನಪದ ಮತ್ತು ಸೋಬಾನೆ ಕಲಾವಿದರ ಸಂಸ್ಥೆ ವತಿಯಿಂದ ಬೀದಿ ನಾಟಕಗಳನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ವಾರ್ತಾ ಇಲಾಖೆಯ ಸಹಯೋಗದಲ್ಲಿ ಬಾಲ್ಯವಿವಾಹ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ವಿರೋಧಿ ಹಾಗೂ ಸ್ವಚ್ಛತೆಯ ಕುರಿತು ನೂರಾರು ಬೀದಿ ನಾಟಕಗಳನ್ನು ಇವರು ಮಾಡಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇತರ ಇಲಾಖೆಗಳಲ್ಲಿ ಬೀದಿ ನಾಟಕಗಳನ್ನು ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ ನೊಂದ ಹೆಣ್ಣುಮಕ್ಕಳಿಗೆ ಸಾಂತ್ವನ ನೀಡುವ, ಎಷ್ಟೋ ಹಿರಿಯರಿಗೆ ಪಿಂಚಣಿ ಮಾಡಿಸುವ ಸೇವೆಯನ್ನು ಸಂಸ್ಥೆಯ ವತಿಯಿಂದ ಮಾಡಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ವತಿಯಿಂದ ಸೋಬಾನೆ ಮೇಳ ಹಾಗೂ ಸೋಬಾನೆ ಮತ್ತು ಜಾನಪದ ಹಾಡುಗಳ ತರಬೇತಿಯನ್ನು ಹಮ್ಮಿಕೊಳ್ಳುವ ಚಿಂತನೆಯನ್ನು ನಡೆಸಲಾಗಿದೆ.
ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದೆ:
ಶ್ರೀ ಏಳುಮಲೆ ಮಹದೇಶ್ವರ ಜನಪದ ಕಲಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಹೊನ್ನಮ್ಮ ಅವರ ಕಲಾಸೇವೆಗೆ ರಾಜ್ಯ ಜಾನಪದ ಅಕಾಡೆಮಿ ಪ್ರಶಸ್ತಿ ಸಂದಿದೆ. ನಾಲ್ಕೂ ಹೆಣ್ಣು ಮಕ್ಕಳ ತಾಯಿಯಾಗಿರುವ ಹೊನ್ನಮ್ಮ ಜಾನಪದವನ್ನೇ ಉಸಿರಾಗಿಸಿಕೊಂಡಿದ್ದಾರೆ. ಆಕಾಶವಾಣಿ ಕಲಾವಿದರಾಗಿರುವ ಹೊನ್ನಮ್ಮ ಸೋಬಾನೆ ಕಲಾವಿದರಾಗಿ ಸಾಕಷ್ಟು ಪ್ರಶಸ್ತಿ, ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಮೈಸೂರು, ಮಂಡ್ಯ, ಕಪ್ಪಡಿ, ಬಿಳಿಗಿರಿರಂಗಬೆಟ್ಟ, ಮದ್ದೂರು ಹಾಗೂ ಹೊರ ಜಿಲ್ಲೆಗಳಲ್ಲೂ ತಮ್ಮ ಸೋಬಾನೆ ಸೊಗಡನ್ನು ಹರಡಿದ್ದಾರೆ.