Oplus_0 
ಜಿಲ್ಲೆ

ಫೆನ್ಸಿಂಗ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ

ಕಿರಣ್ ಮಾದರಹಳ್ಳಿ

ಯಳಂದೂರು: ಸಮೀಪದ ಸಂತೆಮರಹಳ್ಳಿ ಗ್ರಾಮದಲ್ಲಿರುವ ಅರ್ಚರಿ ಹಾಗೂ ಫೆನ್ಸಿಂಗ್ ಶಾಲೆಯ ವಿದ್ಯಾರ್ಥಿಗಳಿಗೆ ಫೆನ್ಸಿಂಗ್ ತರಬೇತಿ ನೀಡಲು 1.99 ಕೋಟಿ ರೂ. ವೆಚ್ಚದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ಮಾಣ ಮಾಡುತ್ತಿರುವ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಶನಿವಾರ ಭೂಮಿಪೂಜೆ ನೆರವೇರಿಸಿದರು.

ನಮ್ಮ ಜಿಲ್ಲೆಯಲ್ಲಿ ಬುಡಕಟ್ಟು ವಿದ್ಯಾರ್ಥಿಗಳಿಗೆ ಅರ್ಚರಿ ಹಾಗೂ ಫೆನ್ಸಿಂಗ್ ತರಬೇತಿ ನೀಡುವ ಕ್ರೀಡಾ ಶಾಲೆಯ ಇರುವುದು ಹೆಮ್ಮೆಯ ವಿಷಯವಾಗಿದೆ. ಈ ಹಿಂದೆ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಇಲ್ಲಿನ ಪ್ರವಾಸಿ ಮಂದಿರದ ಬಳಿ ಮೀಸಲಿರಿಸಿದ್ದ 5 ಎಕರೆ ಜಮೀನಿನಲ್ಲಿ ಈ ಕ್ರೀಡಾಶಾಲೆಯನ್ನು ಆರಂಭಿಸಿ ಎಂದು ಸೂಚನೆ ನೀಡಿದ್ದೆ. ಈಗ ಶಾಲೆ ಇಲ್ಲಿದೆ. ಇಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಶಾಲೆಯ ವಿದ್ಯಾರ್ಥಿಗಳು ತಮ್ಮ ಸಾಧನೆ ತೋರಬೇಕು ಎದರು.

ಕತ್ತಿವರಸೆ (ಫೆನ್ಸಿಂಗ್) ಒಂದು ಒಳಾಂಗಣ ಕ್ರೀಡೆಯಾಗಿದೆ. ಹಾಗಾಗಿ ಇದಕ್ಕೆ ಒಳಾಂಗಣ ಕ್ರೀಡಾಂಗಣದ ಅವಶ್ಯಕತೆ ಇದ್ದು ಇದನ್ನು ಇಲ್ಲಿಗೆ ಮಂಜೂರು ಮಾಡಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕ್ರೀಡಾಂಗಣ ನಿರ್ಮಿಸಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಅಲ್ಲದೆ ಇದು ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಶಾಲೆಯಾಗಿದ್ದು ಇದನ್ನು ಒಂದು ಲ್ಯಾಂಡ್ ಮಾರ್ಕ್ ಮಾಡುವ ನಿಟ್ಟಿನಲ್ಲಿ ಇದರ ವಿನ್ಯಾಸವನ್ನು ಆಕರ್ಷಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂತೆಮರಹಳ್ಳಿ ಒಂದು ದೊಡ್ಡ ಗ್ರಾಮ. ನಾಲ್ಕು ದಿಕ್ಕುಗಳಿಂದಲೂ ಇದಕ್ಕೆ ಕೂಡು ರಸ್ತೆ ಇದೆ. ಇದೊಂದು ತಾಲೂಕು ಕೇಂದ್ರವಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಮುಂದಿನ ದಿನಗಳಲ್ಲಿ ಇಂತಹ ಅವಕಾಶಗಳು ಲಭಿಸಿದರೆ ಇದನ್ನು ತಾಲೂಕು ಕೇಂದ್ರವಾಗಿ ಮಾಡಲು ನಾನು ಶಕ್ತಿ ಮೀರಿ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷೆ ರಾಜಮ್ಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಸ್ವಾಮಿ, ಎಇಇ ಚಿಕ್ಕಲಿಂಗಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಮಧುತೇಜಸ್, ದೊರೆಸ್ವಾಮಿ, ಮಂಜುನಾಥ್, ಗುತ್ತಿಗೆದಾರ ಬೆಂಗಳೂರು ಶಿವಕುಮಾರ್, ಜೆಇ ಸ್ಫೂರ್ತಿ, ಕಂದಹಳ್ಳಿ ನಂಜುಂಡಸ್ವಾಮಿ, ಚೇತನ್ ದೊರೆರಾಜ್ ಪಿಎಸ್‌ಐ ತಾಜುದ್ದೀನ್, ರಾಘು, ಪಶಿ ಸೇರಿದಂತೆ ಅನೇಕರು ಇದ್ದರು.