ಚಾಮರಾಜನಗರ: ನಾಯಕ ಸಮುದಾಯದ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ನಂತಹ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಎಂ.ರಾಮಚಂದ್ರ ಸಲಹೆ ನೀಡಿದರು.
ನಗರದ ಮಹರ್ಷಿ ವಾಲ್ಮೀಕಿ ಭವನದಲ್ಲಿ ತಾಲೂಕು ನಾಯಕ ಸರ್ಕಾರಿ ನೌಕರರ ಕ್ಷೇಮಾಭಿವೃದ್ದಿ ಸಂಘ, ನಾಯಕ ನೌಕರರ ಸ್ನೇಹ ಬಳಗ ಹಾಗೂ ಮಹರ್ಷಿ ಶ್ರೀವಾಲ್ಮೀಕಿ ನೌಕರರ ಸೌಹಾರ್ದ ಸಹಕಾರ ನಿಯಮಿತ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ 11ನೇ ವರ್ಷದ ವಾರ್ಷಿಕೋತ್ಸವ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರು ಮೊದಲೇ ಶಿಕ್ಷಣಕ್ಕೆ ಒತ್ತು ನೀಡಿದರು. ಲವಕುಶರಿಗೆ ವಿದ್ಯೆ ಕಲಿಸುವ ಮೂಲಕ ತಂದೆ ರಾಮನನ್ನು ವಿದ್ಯೆಯಲ್ಲಿ ಮೀರಿಸುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಆಗಾಗಿ ಸಮುದಾಯದ ಮಕ್ಕಳು ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಬಾರದು. ನಾವು ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ಯಾವುದೇ ಸರ್ಕಾರಿ ಸೌಲಭ್ಯಗಳು ಕಡಿಮೆ ಇತ್ತು. ಪ್ರಸ್ತುತ ಸರ್ಕಾರ ಪೋಷಕರಿಗೆ ಹೊರೆಯಾಗದ ರೀತಿಯಲ್ಲಿ ಉಚಿತ ಶಿಕ್ಷಣಕ್ಕೆ ಆರ್ಥಿಕ ನೆರವು, ಉಚಿತ ತರಬೇತಿ ನೀಡುತ್ತಿದೆ. ಇಂತಹ ಅವಕಾಶಗಳನ್ನು ಸದ್ಬಳಕೆಮಾಡಿಕೊಂಡು ಜನಾಂಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಕೆಪಿಸಿಸಿ ಪರಿಶಿಷ್ಟ ಪಂಗಡಗಳ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶ್ರೀಮಹರ್ಷಿ ವಾಲ್ಮೀಕಿ ಗುರುಕುಲ ಸೇವಾ ಟ್ರಸ್ಟ್ ಅಧ್ಯಕ್ಷ ಪು.ಶ್ರೀನಿವಾಸನಾಯಕ ಮಾತನಾಡಿ, ನಾಯಕ ಸಮುದಾಯದ ವಿದ್ಯಾರ್ಥಿಗಳು ಬಹಳ ಕಷ್ಟಪಟ್ಟು ಓದಿದರೇ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗಳನ್ನು ಅನುಭವಿಸಬಹುದಾಗಿದೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು. ಪಾಲಕರು ಕೂಡ ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ಕಲ್ಪಿಸುವ ನಿಟ್ಟಿನಲ್ಲಿ ಸಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಮುಖಂಡ ಕೆಲ್ಲಂಬಳ್ಳಿ ಸೋಮನಾಯಕ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಸಂಘದ ಅಧ್ಯಕ್ಷ ಕಣ್ಣೇಗಾಲ ಎಂ.ಶಿವಕುಮಾರ್, ಶಿಕ್ಷಕ ಲಿಂಗರಾಜು, ಚಂದಕವಾಡಿ ಕಪಿನಿನಾಯಕ, ನಗರಸಭಾ ಮಾಜಿ ಅಧ್ಯಕ್ಷ ಸುರೇಶ್ ನಾಯಕ, ಶಿಕ್ಷಕ ಕೆಂಪನಪುರ ಸಿದ್ದರಾಜು, ಹರದನಹಳ್ಳಿ ನಟರಾಜು, ನಿವೃತ್ತ ಪ್ರಾಂಶುಪಾಲ ಬಂಗಾರನಾಯಕ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ವಾಲ್ಮೀಕಿ ಟ್ರಸ್ಟ್ ಅಧ್ಯಕ್ಷ ಬಿ.ಕಾಂ.ಮಹದೇವನಾಯಕ, ಮಹದೇವನಾಯಕ, ರಾಜುನಾಯಕ, ಜ.ಸುರೇಶ್‌ನಾಗ್, ರಾಮನಾಯಕ, ಉಪನ್ಯಾಸಕ ನಾರಾಯಣಸ್ವಾಮಿ, ಗ್ರಾ.ಪಂ.ಅಧ್ಯಕ್ಷ ಆರ್.ಮಾದೇಶ್, ಸಂಘದ ಉಪಾಧ್ಯಕ್ಷ ನಾಗನಾಯಕ, ಗೌರವ ಅಧ್ಯಕ್ಷೆ ಮೀನಾಕ್ಷಿ, ಖಜಾಂಚಿ ಕರಿಯಪ್ಪ, ನಿರ್ದೇಶಕ ಲಿಂಗರಾಜು, ಮಂಜುನಾಥಸ್ವಾಮಿ, ಕೆಲ್ಲಂಬಳ್ಳಿ ನಾಗರಾಜು ಹಾಗೂ ಇತರರು ಭಾಗವಹಿಸಿದ್ದರು.