ಜಿಲ್ಲೆ

ಮತ್ತೊಮ್ಮೆ ಮಹಿಳಾ ಅಧಿಕಾರಿಗಳ ದರ್ಬಾರ್

ಎ.ಎಸ್.ಮಣಿಕಂಠ

ಚಾಮರಾಜನಗರ: ಜಿಲ್ಲೆಯ ಆಯಕಟ್ಟಿನ ಹುದ್ದೆಗಳಲ್ಲಿ ಮತ್ತೊಮ್ಮೆ ಮಹಿಳಾ ಅಧಿಕಾರಿಗಳು ಸ್ಥಾನಗಳನ್ನು ಅಲಕಂರಿಸುತ್ತಿದ್ದು, ಆಡಳಿತ ವರ್ಗದಲ್ಲಿ ಮಹಿಳಾ ಸಮಾನತೆ ಗೋಚರಿಸುತ್ತಿದೆ.

ಜಿಲ್ಲೆಯ ಪ್ರಮುಖ ಆಡಳಿತ ಹುದ್ದೆಗಳಾದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಾನವನ್ನು ಈಗಾಗಲೇ ಮಹಿಳಾ ಅಧಿಕಾರಿಗಳು ವಹಿಸಿಕೊಂಡು ಉತ್ತಮವಾಗಿ ಆಡಳಿತ ನಡೆಸಿಕೊಂಡು ಬರುತ್ತಿದ್ದಾರೆ. ಈಗ ಮತ್ತೊಂದು ಪ್ರಮುಖ ಹುದ್ದೆಯಾಗಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹುದ್ದೆಗೂ ಸರ್ಕಾರದಿಂದ ಮಹಿಳಾ ಅಧಿಕಾರಿಯೊಬ್ಬರು ನೇಮಕಗೊಂಡಿದ್ದು, ಮತ್ತೊಮ್ಮೆ ಆಡಳಿತ ವರ್ಗದಲ್ಲಿ ಮಹಿಳಾ ಅಧಿಕಾರಿಗಳ ದರ್ಬಾರ್ ಪ್ರಾರಂಭವಾಗಿದೆ.

ಜಿಲ್ಲಾಧಿಕಾರಿಯಾಗಿ ಸಿ.ಟಿ.ಶಿಲ್ಪನಾಗ್ ಅವರು ಕಳೆದ ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಬಹಳ ದಕ್ಷತೆಯಿಂದ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ. ಈ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪದ್ಮಿನಿಸಾಹು ಅವರು ಇತ್ತೀಚೆಗೆ ವರ್ಗಾವಣೆಗೊಂಡ ಬಳಿಕ ಡಾ.ಬಿ.ಟಿ.ಕವಿತಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿಯಾಗಿರುವ ಗೀತಾ ಹುಡೇದ ಅವರು ಕೂಡ ಉತ್ತಮ ಮಹಿಳಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಚಿರಪರಿಚಿತರಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದ್ ಪ್ರಕಾಶ್ ಮೀನಾ ಅವರ ಸ್ಥಾನವನ್ನು ಮೋನಾ ರೋಹಟ್ ಅವರು ವಹಿಸಿಕೊಳ್ಳಲಿದ್ದು, ಆಡಳಿತ ವರ್ಗದಲ್ಲಿ ಮಹಿಳಾ ಅಧಿಕಾರಿಗಳು ಮತ್ತೊಮ್ಮೆ ಮಿಂಚಲಿದ್ದಾರೆ. ಆಯಕಟ್ಟಿನ ಹುದ್ದೆಗಳಲ್ಲದೇ ಜಿಲ್ಲಾಮಟ್ಟದ ಇನ್ನಿತರೆ ಪ್ರಮುಖ ಹುದ್ದೆಗಳಲ್ಲೂ ಮಹಿಳಾಮಣಿಗಳು ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರಿಗೆ ಇದೊಂದು ಆದರ್ಶಪ್ರಾಯವೂ ಆಗಿದೆ. ಜತೆಗೆ ಸಂವಿಧಾನದ ಸಮಾನತೆಯ ಆಶಯಗಳು ಕಾರ್ಯರೂಪಕ್ಕೆ ಬರುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಮಹಿಳಾಮಣಿಯರ ದರ್ಬಾರ್:
ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಹುದ್ದೆಗಳಲ್ಲದೇ ಮತ್ತಷ್ಟು ಮಹಿಳೆಯರು ಜಿಲ್ಲೆಯಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಹುದ್ದೆಯಲ್ಲಿ ಲಕ್ಷ್ಮೀ ಅವರು ಪಾದರಸದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದಲ್ಲದೇ ಬಳಿಗಿರಿರಂಗನಾಥ ಹುಲಿ ಸಂರಕ್ಷಿತಾ ಅರಣ್ಯ ಪ್ರದೇಶದ ಸಂರಕ್ಷಣಾಧಿಕಾರಿಯಾಗಿ ದೀಪಾ ಜೆ.ಕಂಟ್ರಾಕ್ಟರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಮಂಜುಳಾ, ಜಿಲ್ಲಾ ಕಾರ್ಮಿಕ ಅಧಿಕಾರಿಯಾಗಿ ಡಾ.ಸವಿತಾ, ಭೂ ದಾಖಲೆಗಳ ಉಪನಿರ್ದೇಶಕಿ ವಿದ್ಯಾಯಿನಿ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಬಿ.ಎಸ್.ಭಾರತಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅದಲ್ಲದೇ ಮತ್ತಷ್ಟು ಜಿಲ್ಲಾ ಮಟ್ಟದ ಹುದ್ದೆಗಳಲ್ಲಿ ಹಾಗೂ ತಾಲೂಕು ಮಟ್ಟದ ಹುದ್ದೆಗಳಲ್ಲಿ ಮಹಿಳೆಯರು ಅಧಿಕಾರಿ ನಿರ್ವಹಿಸುತ್ತಿದ್ದು, ಸಾಕಷ್ಟು ಜನರಿಗೆ ಇದು ಪ್ರೇರಣೆಯ ವಿಚಾರವೂ ಆಗಿದೆ.

ಹಿಂದೆಯೂ ಮಹಿಳೆಯರದ್ದೇ ಅಧಿಪತ್ಯ:
ಜಿಲ್ಲೆಯಲ್ಲಿ 2 ವರ್ಷಗಳ ಹಿಂದೆಯೂ ಆಯಕಟ್ಟಿನ ಹುದ್ದೆಗಳನ್ನು ಮಹಿಳಾ ಅಧಿಕಾರಿಗಳು ಪಡೆದುಕೊಂಡಿದ್ದರು. ಐಎಎಸ್ ಅಧಿಕಾರಿ ಚಾರುಲತಾ ಸೋಮಲ್ ಅವರು ಜಿಲ್ಲಾಧಿಕಾರಿಯಾಗಿ ಬಹಳ ದಕ್ಷ ಮತ್ತು ಪ್ರಾಮಾಣಿಕ ಆಡಳಿತಕ್ಕೆ ಹೆಸರಾಗಿದ್ದರು. ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾತ್ಯಾಯಿನಿ ದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ದಿವ್ಯಾ ಸಾರಾ ಥಾಮಸ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆ.ಎಂ.ಗಾಯತ್ರಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮತ್ತೊಮ್ಮೆ ಇದು ಮರುಕಳಿಸಿದ್ದು, ಆಡಳಿತ ವರ್ಗದಲ್ಲಿ ಮಹಿಳಾ ಅಧಿಕಾರಿಗಳು ಇದ್ದರೆ ಸಾರ್ವಜನಿಕರಿಗೆ ಉತ್ತಮ ರೀತಿಯ ಸ್ಪಂದನೆ ದೊರೆಯುತ್ತದೆ. ಸರ್ಕಾರಿ ಕೆಲಸಗಳು ಸಕಾಲಕ್ಕೆ ಆಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ವಿದ್ಯಾರ್ಥಿನಿಯರಿಗೆ ಪ್ರೇರಣೆ:
ಆಡಳಿತ ವರ್ಗದಲ್ಲಿ ಮಹಿಳಾ ಅಧಿಕಾರಿಗಳು ಹೆಚ್ಚಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಸಾಕಷ್ಟು ವಿದ್ಯಾರ್ಥಿನಿಯರಿಗೆ ಇದು ಪ್ರೇರಣೆಯಾಗಿದೆ. ಜಿಲ್ಲೆಯಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ ಕಡಿಮೆ ಇದೆ. ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಕಾಲೇಜು ಮೆಟ್ಟಿಲು ಏರುವ ಮುನ್ನವೇ ಮದುವೆಯಾಗುತ್ತಿರುವುದು ಕಂಡುಬರುತ್ತಿದೆ. ಬಾಲ್ಯ ವಿವಾಹವೂ ಕೂಡ ಹೆಚ್ಚಾಗಿ ನಡೆಯುತ್ತಿರುವುದೂ ಕೂಡ ಮಹಿಳೆಯರ ಸಾಕ್ಷರತಾ ಪ್ರಮಾಣ ಕುಸಿಯಲು ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ಆಯಕಟ್ಟಿನ ಹುದ್ದೆಗಳನ್ನು ಮಹಿಳೆಯರು ಅಲಂಕರಿಸಿದಾಗ ನಾವು ಲೂಡ ಇಂತಹ ಹುದ್ದೆಗಳನ್ನು ಪಡೆಯಬಹುದೇ ಎಂಬ ಆಶಾಭಾವನೆ ವಿದ್ಯಾರ್ಥಿನಿಯರಲ್ಲಿ ಮೂಡುತ್ತದೆ. ಶಾಲಾ-ಕಾಲೇಜುಗಳ ಕಾರ್ಯಕ್ರಮಗಳಲ್ಲಿ ಈ ಅಧಿಕಾರಿಗಳು ಭಾಗವಹಿಸಿದಾಗ ಸಾಕಷ್ಟು ಮಕ್ಕಳು ನಾವು ಇವರಂತೆ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಬೇಕು ಎಂಬ ಮಾತುಗಳನ್ನು ಆಡಿದ್ದಾರೆ. ಇದು ಮಹಿಳೆಯರ ಸಾಧನೆಯ ಜತೆಗೆ ಸೀ ಕುಲದ ಶಕ್ತಿಯಾಗಿದೆ ಎಂದು ಪ್ರಾಧ್ಯಾಪಕಿ ಡಾ.ಸುಷ್ಮಾ ಟವರು ವಿಜಯವಾಣಿ ಜತೆಗೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಮಹಿಳೆಯರು ಮನಸ್ಸು ಮಾಡಿದರೇ ಏನು ಬೇಕಾದರೂ ಸಾಧನೆ ಮಾಡುತ್ತಾಳೆ ಎಂಬುವುದಕ್ಕೆ ಇದು ಸಣ್ಣ ಉದಾಹರಣೆಯಾಗಿದೆ. ಶಾಪಗ್ರಸ್ತ ಜಿಲ್ಲೆ ಎಂಬ ಕೊಳೆಯನ್ನು ತೊಳೆದು ಮಹಿಳಾ ಅಧಿಕಾರಿಗಳು ಇದರ ಮೆರಗು ಹೆಚ್ಚಿಸಿದ್ದಾರೆ. ಸಾರ್ವಜನಿಕರಿಗೆ ಬಹುಬೇಗ ಸ್ಪಂದಿಸುವುದು ಮಹಿಳಾ ಅಧಿಕಾರಿಯೇ ಆಗಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರು ಈ ದಕ್ಷ ಅಧಿಕಾರಿಗಳನ್ನು ಸ್ಪೂರ್ತಿದಾಯಕವಾಗಿಸಿಕೊಂಡಿದ್ದಾರೆ.-ಡಾ.ಎ.ಆರ್.ಸುಷ್ಮಾ, ಸಹಾಯಕ ಪ್ರಾಧ್ಯಾಪಕಿ, ರಾಜ್ಯಶಾಸ ವಿಭಾಗ, ಜೆಎಸ್‌ಎಸ್ ಮಹಿಳಾ ಕಾಲೇಜು, ಚಾಮರಾಜನಗರ.