ಚಾಮರಾಜನಗರ: ಬಹುಜನ ಸಮಾಜ ಪಕ್ಷದ ತಮಿಳುನಾಡು ರಾಜ್ಯಾಧ್ಯಕ್ಷ ಆರ್ಮುಸ್ಟ್ರಾಂಗ್ ಅವರನ್ನು ಹತ್ಯೆ ಮಾಡಿರುವ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಎಸ್ಪಿ ಜಿಲ್ಲಾ ಘಟಕದ ವತಿಯಿಂದ ಶನಿವಾರ ಮನವಿ ಸಲ್ಲಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ ಮಾತನಾಡಿ, ತಮಿಳುನಾಡಿನಲ್ಲಿ ಬಿಎಸ್ಪಿ ನಾಯಕನನ್ನು ಕೆಲವು ಕಿಡಿಗೇಡಿಗಳು ಬರ್ಬರವಾಗಿ ಹತ್ಯೆ ಮಾಡಿರುವುದು ದೇಶವೆ ತಲೆತಗ್ಗಿಸುವಂತಹ ವಿಚಾರವಾಗಿದೆ. ಇದು ದೇಶದ ಕಾನೂನು ವ್ಯವಸ್ಥೆಗೆ ಧಕ್ಕೆಯಾಗಿದ್ದು, ಅಮಾಯಕರು ಭಯದಿಂದ ಬದುಕುವಂತಾಗಿದೆ. ಆರ್ಮುಸ್ಟ್ರಾಂಗ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಅವರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಚಂದ್ರಕಾಂತ್, ಟೌನ್ ಅಧ್ಯಕ್ಷ ರಂಗಸ್ವಾಮಿ, ಬಿ.ವಿ.ಎಫ್ ಸಂಯೋಜಕ ರವಿ, ಗ್ರಾ.ಪಂ.ಸದಸ್ಯ ದ್ಯಾವಲಪುರ ಶಿವಣ್ಣ, ಬಾಬು ರಾಮಸಮುದ್ರ ಹಾಗೂ ಇತರರು ಹಾಜರಿದ್ದರು.