ಜಿಲ್ಲೆ

ಸರ್ಕಾರಿ ಉಪಕರಣಾಗಾರದಲ್ಲಿ ಹೊಸ ಕೋರ್ಸ್‌ಗಳು

ಚಾಮರಾಜನಗರ : ಗುಂಡ್ಲುಪೇಟೆಯಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ 2024-25ನೇ ಸಾಲಿನಲ್ಲಿ ಕೌಶಲ್ಯಾಭಿವೃದ್ಧಿಯ ಹೊಸ ಕೋರ್ಸ್‌ಗಳು ಆರಂಭಿಸಲಾಗಿದ್ದು, ಪ್ರವೇಶಾತಿ ಪ್ರಾರಂಭವಾಗಿದೆ ಎಂದು ತರಬೇತಿ ಕೇಂದ್ರದ ಪ್ರಾಂಶುಪಾಲ ಅನಿಲ್‌ಕುಮಾರ್ ತಿಳಿಸಿದರು.

ಈ ಹಿಂದೆ ತರಬೇತಿ ಕೇಂದ್ರದಲ್ಲಿ ಡಿಪ್ಲೋಮ ಇನ್ ಟೂಲ್ ಮತ್ತು ಡೈ ಮೇಕಿಂಗ್ ಕೋರ್ಸ್ ಮಾತ್ರ ಲಭ್ಯವಿತ್ತು. ಈ ಸಾಲಿನಲ್ಲಿ ಡಿಪ್ಲೋಮ ಇನ್ ಎಲೆಕ್ಟ್ರಕಲ್ ಮತ್ತು ಎಲೆಕ್ಟ್ರನಿಕ್ಸ್ ಇಂಜಿನಿಯರಿಂಗ್ ಹಾಗೂ ಡಿಪ್ಲೋಮ ಇನ್ ಮೆಕಟ್ರಾನಿಕ್ಸ್ ಕೋರ್ಸ್‌ಗಳು ಪ್ರಾರಂಭವಾಗಿದೆ. ಈ ಕೋರ್ಸ್‌ಗಳಿಗೆ ತಲಾ 60 ವಿದ್ಯಾರ್ಥಿಗಳ ಅಗತ್ಯವಿದ್ದು, ಎಸ್‌ಎಸ್‌ಎಲ್‌ಸಿ, ಪಿಯುಸಿ ತೇರ್ಗಡೆಯಾದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈಗಾಗಲೇ ಮೊದಲನೇ ಸುತ್ತಿನ ಪ್ರವೇಶಾತಿ ಮುಕ್ತಾಯಗೊಂಡು, ಎರಡನೇ ಅವಧಿಯ ಪ್ರವೇಶಾತಿ ಪ್ರಾರಂಭವಾಗಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ 3 ವರ್ಷ ತರಬೇತಿ ನೀಡಲಾಗುವುದು. ಕ್ಯಾಂಪಸ್ ಸೆಲೆಕ್ಷನ್ ಬಳಿಕ 1 ವರ್ಷಗಳ ಕಾಲ ಇಂಟರ್‌ಶಿಪ್ ಇರಲಿದೆ. ಈ ಅವಧಿಯಲ್ಲಿ ತಿಂಗಳಿಗೆ 15-20 ಸಾವಿರ ರೂ, ವೇತನ ನೀಡಲಾಗುವುದು. ಅಲ್ಲದೇ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿವೇತನ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಪಿಯುಸಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು 2ನೇ ವರ್ಷಕ್ಕೆ ನೇರವಾಗಿ ಪ್ರವೇಶ ಪಡೆದುಕೊಳ್ಳಬಹುದಾಗಿದ್ದು, ತರಬೇತಿ ಕೇಂದ್ರದಲ್ಲಿ ಕೌಶಲ್ಯಾಭಿವೃದ್ಧಿಗೆ ಸಂಬಂಧಿಸಿದಂತೆ ಅಡ್ವಾನ್ಸ್ ಯಂತ್ರಗಳು ಲಭ್ಯವಿದೆ. ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ 9164261642, 9663797925 ನಂಬರ್‌ಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸದರು. ಗೋಷ್ಠಿಯಲ್ಲಿ ತರಬೇತಿ ಕೇಂದ್ರದ ಮುಖ್ಯಸ್ಥ ಸುಭಾಷ್ ಚಂದ್ರು, ವಿಜಯ್ ಕುಮಾರ್ ಹಾಜರಿದ್ದರು.