ಚಾಮರಾಜನಗರ: ತಾಲೂಕಿನ ಭೋಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಹೆಸರಿಗೆ ಕೆಲ್ಲಂಬಳ್ಳಿ ಗ್ರಾಮದಲ್ಲಿ ತಮಗೆ ಸೇರಿದ ನಿವೇಶನವನ್ನು ಅಕ್ರಮ ಖಾತೆ ಮಾಡಲಾಗಿದೆ ಎಂದು ದುಂಡುಮಾದಯ್ಯ ಮತ್ತು ಪುತ್ರ ರವಿಕುಮಾರ್ ಆರೋಪಿಸಿದರು.
ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದಲ್ಲಿ 1992 ಮೇ.5 ರಂದು ಆಶ್ರಯ ಯೋಜನೆಯಡಿಯಲ್ಲಿ ಖಾತೆ ನಂ. 341/2 ರಲ್ಲಿ 40-30 ಅಳತೆಯ ನಿವೇಶನವನ್ನು ನೀಡಿರುತ್ತಾರೆ. ನಿವೇಶನ ಖಾತೆ ಮಾಡಿಕೊಡುವಂತೆ ಗ್ರಾ.ಪಂ ಗೆ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ, ಈ ನಿವೇಶನ ಈಗಾಗಲೇ ರೂಪ ಕೋಂ ಸುರೇಶ್ ಹೆಸರಿನಲ್ಲಿ ಅಸಸ್‌ಮೆಂಟ್ ದಾಖಲಾಗಿದ್ದು, ದಾನಪತ್ರದ ಆಧಾರದ ಮೇರೆ ಖಾತೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ. ಗ್ರಾ.ಪಂ ಬಿಲ್‌ಕಲೆಕ್ಟರ್ ಬಿ.ಎಂ.ಮಹೇಶ್, ಹಿಂದಿನ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಮಲ್ಲಿಕಾರ್ಜುನ , ಕೆಲ್ಲಂಬಳ್ಳಿ ನೀರುಗಂಟಿ ನಾಗೇಶ್ ಸೇರಿಕೊಂಡು ಅಧ್ಯಕ್ಷೆ ರೂಪ ಹೆಸರಿಗೆ ತಮ್ಮ ನಿವೇಶನವನ್ನು ಅಕ್ರಮ ಖಾತೆ ಮಾಡಿದ್ದಾರೆ ಎಂದು ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ದೂರಿದರು.
ಗ್ರಾ.ಪಂ ಅಧ್ಯಕ್ಷೆ ರೂಪ, ನೀರುಗಂಟಿ ನಾಗೇಶ್ ಅವರ ಸಹೋದರಿಯಾಗಿದ್ದಾರೆ. ಗ್ರಾ.ಪಂ.ಪ್ರಭಾವ ಬಳಸಿ ಸಹೋದರಿ ರೂಪ ಹೆಸರಿಗೆ ನಿವೇಶನ ಅಕ್ರಮ ಖಾತೆ ಮಾಡಿಸಿಕೊಂಡಿದ್ದಾರೆ. ಅಧ್ಯಕ್ಷೆ ರೂಪ ಅವರಿಗೆ ಮಾಡಿಕೊಟ್ಟಿರುವ ಖಾತೆ ರದ್ದುಪಡಿಸಬೇಕು. ಅಕ್ರಮ ಖಾತೆ ಮಾಡಿಕೊಟ್ಟಿರುವ ಪಿಡಿಓ, ಬಿಲ್‌ಕಲೆಕ್ಟರ್, ನೀರುಗಂಟಿ ವಿರುದ್ದ ಕ್ರಮಕೈಗೊಳ್ಳಬೇಕು ಆಗ್ರಹಿಸಿದರು.