ಚಾಮರಾಜನಗರ : ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ಅನಾಥ ಶವ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ನಗರದ ಶ್ರೀಭುನೇಶ್ವರಿ ವೃತ್ತದಲ್ಲಿದ್ದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚಿತ್ರದುರ್ಗ ಮೂಲದ ಅನಾಥ ವ್ಯಕ್ತಿಯೊಬ್ಬ ಮಂಗಳವಾರ ಸಂಜೆ ಮೃತಪಟ್ಟಿದ್ದರು. ಬಳಿಕ ಅವರ ಮೃತದೇಹವನ್ನು ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಬೋಧನಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಈ ವೇಳೆ ಪೊಲೀಸರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಅವರಿಗೆ ಮಾಹಿತಿ ನೀಡಿದ್ದರು. ಬಳಿಕ ಮಹಾಸಭಾ ಪದಾಧಿಕಾರಿಗಳು ವಿಧಿನಿಧಾನಗಳನ್ನು ನೆರವೇರಿಸುವ ಮೂಲಕ ಅನಾಥಶವದ ಅಂತ್ಯಸಂಸ್ಕಾರ ನೆರವೇರಿದರು. ಮಹಾಸಭಾ ಯುವ ಘಟಕ ತಾಲೂಕು ಅಧ್ಯಕ್ಷ ಗುರುಪ್ರಸಾದ್, ಮುಖಂಡರಾದ ಪುಣಜನೂರು ಗಿರೀಶ್, ಚಿಕ್ಕಬಸಪ್ಪ, ರಾಮಸಮುದ್ರ ಗಿರೀಶ್, ಆಟೋ ಅಶೋಕ್ ಇತರರು ಭಾಗಿಯಾಗಿದ್ದರು.