ಜಿಲ್ಲೆ

ಭಿನ್ನಾಭಿಪ್ರಾಯ ಬದಿಗೊತ್ತಿ ಸಂಘ ಬಲಿಷ್ಠಗೊಳಿಸಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ : ರೈತರು ತಮ್ಮಲ್ಲಿರುವ ಭಿನ್ನಾಭಿಪ್ರಾಯ ದೂರವಾಗಿಸಿ, ಸಂಘಟನೆಯನ್ನು ಬಲಿಷ್ಠಗೊಳಿಸಿದರೆ ಸಮಸ್ಯೆಗಳನ್ನು ಎದುರಿಸಲು ಸಾಧ್ಯ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಸಂಗಪ್ಪ ಆಲೂರ ಸಲಹೆ ನೀಡಿದರು.

ನಗರದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಆಯೋಜಿಸಿದ್ದ ವಿಭಾಗೀಯ ಮಟ್ಟದ ರೈತರ ತರಬೇತಿ ಮತ್ತು ಅಧ್ಯಯನ ಶಿಬಿರ ಹಾಗೂ ಸಂಘದ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರೈತರು ರೈತ ಉತ್ಪಾದಕ ಸಂಘಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬೇಕಾದರೆ, ಪ್ರತಿಯೊಬ್ಬರು ಒಗ್ಗಟ್ಟಾಗಿ ಇರಬೇಕು. ಯಾವುದೇ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಳ್ಳಬಾರದು. ಜಾತಿ, ಧರ್ಮ, ಮೇಲು-ಕೀಳು ಎಂಬ ಭಾವನೆ ಇರಬಾರದು ಆಗ ಮಾತ್ರ ಸಂಘ ಬಲಿಷ್ಠವಾಗಿರುತ್ತದೆ ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ರಾಜ್ಯದ 10 ಜಿಲ್ಲೆಗಳಲ್ಲಿ ನಮ್ಮ ಸಂಘ ಆರು ತಿಂಗಳಿನಿಂದ ಕಾರ್ಯೊನ್ಮುಖವಾಗಿ ರೈತರ ಪರ ದುಡಿಯುತ್ತಿದೆ. ಸೈದ್ಧಾಂತಿಕವಾಗಿ ಈ ಸಂಘವನ್ನು ಸಂಘಟನೆ ಮಾಡಲಾಗಿದ್ದು, ಇಲ್ಲಿ ಸರ್ವರು ಸಮನಾಗಿ ಇರಬೇಕು. ಎಲ್ಲರೂ ತಮ್ಮ ಸಲಹೆ, ಸೂಚನೆಗಳನ್ನು ನೀಡಬೇಕು. ವಿಚಾರಧಾರೆಗಳನ್ನು ಪರಸ್ಪರ ಹಂಚಿಕೊಳ್ಳಬೇಕು ಎಂದು ಹೇಳಿದರು.

ಈ ವೇಳೆ ಕಚೇರಿ ನಾಮಫಲಕ ಉದ್ಘಾಟನೆಯನ್ನು ಉಮ್ಮತ್ತೂರಿನ ಆಕೃತಿ ಎಕೋ ಫ್ರೆಂಡ್ಲಿ ಎಂಟರ್‌ಪ್ರೈಸಸ್‌ನ ವರ್ಷ ಉದ್ಘಾಟಿಸಿದರು. ಬಳಿಕ ಮೈಸೂರು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಚ್.ಎಂ.ನಾಗರಾಜ್, ಹಿರಿಯ ವಿಜ್ಞಾನಿ ಸಿದ್ದಪ್ಪ ಸೇರಿದಂತೆ ಇನ್ನಿತರರು ರೈತರಿಗೆ ಉಪನ್ಯಾಸ ನೀಡಿದರು. ಶಿಬಿರದಲ್ಲಿ ಸಂಘದ ಕಾರ್ಯಾಧ್ಯಕ್ಷ ತೇಜಸ್ವಿ ಪಟೇಲ್, ಗೌರವಾಧ್ಯಕ್ಷ ಆಲತ್ತೂರು ಸಿದ್ದಲಿಂಗಪ್ಪ, ಜಿಲ್ಲಾಧ್ಯಕ್ಷ ಹಾಲಿನ ನಾಗರಾಜು, ರಾಜೇಶ್, ಮುದ್ದಹಳ್ಳಿ ಚಿಕ್ಕಸ್ವಾಮಿ, ಡಾ. ಹನುಮಯ್ಯ, ವಕೀಲ ಕಿಶನ್ ಹಾಗೂ ಇತರರು ಉಪಸ್ಥಿತರಿದ್ದರು.