ಚಾಮರಾಜನಗರ: ಜಿಲ್ಲಾ ಮತ್ತು ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಸುಮಾರು 6 ತಿಂಗಳಾದರೂ ನಗದು ಬಹುಮಾನ ನೀಡದ ಕ್ರೀಡಾ ಇಲಾಖೆ ವಿರುದ್ಧ ಕ್ರೀಡಾಪಟುಗಳು ಆಕ್ರೋಶ ಹೊರ ಹಾಕಿದ್ದಾರೆ.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜನವರಿಯಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜನೆ ಮಾಡಿತ್ತು. ಗ್ರಾಮೀಣ ಕ್ರೀಡಾಪಟುಗಳಿಗೆ ಅನುಕೂಲವಾಗುವ ಉದ್ದೇಶದಿಂದ ಕ್ರೀಡಾಕೂಟದಲ್ಲಿ ಕಬ್ಬಡ್ಡಿ, ಖೋ ಖೋ, ವಾಲಿಬಾಲ್, ಕುಸ್ತಿ, ಯೋಗ, ಎತ್ತಿನಗಾಡಿ ಓಟ ಹಾಗೂ ಇನ್ನಿತರೆ ಕ್ರೀಡಾ ಕೂಟಗಳನ್ನು ಆಯೋಜಿಸಲಾಗಿತ್ತು.
ಜಿಲ್ಲೆಯಲ್ಲಿ ನಡೆದ ಗ್ರಾಮೀಣ ಕ್ರೀಡಾ ಕೂಟದಲ್ಲಿ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಚಾಮರಾಜನಗರ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 116 ಪುರುಷರು ಮತ್ತು 78 ಮಹಿಳೆಯರು, ಹನೂರಿನಿಂದ 108 ಪುರುಷರು ಮತ್ತು 24 ಮಹಿಳೆಯರು, ಕೊಳ್ಳೇಗಾಲ 108 ಪುರುಷರು ಮತ್ತು 24 ಮಹಿಳೆಯರು, ಗುಂಡ್ಲುಪೇಟೆ 109 ಪುರುಷರು ಮತ್ತು 72 ಮಹಿಳೆಯರು ಹಾಗೂ ಯಳಂದೂರು ತಾಲೂಕಿನಿಂದ 110 ಪುರುಷರು ಮತ್ತು 49 ಮಹಿಳಾ ಕ್ರೀಡಾಪಟುಗಳು ಜಿಲ್ಲಾ ಮಟ್ಟಕ್ಕೆ ವಿಜೇತರಾಗಿ ಆಯ್ಕೆಯಾಗಿದ್ದರು.
ತಾಲೂಕು ಮಟ್ಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳ ಗುಂಪು ಕ್ರೀಡೆಯಲ್ಲಿ ವಿಜೇತರಾದವರಿಗೆ ಪ್ರಥಮ ಸ್ಥಾನಕ್ಕೆ 15000 ರೂ. ದ್ವಿತೀಯ 8000 ರೂ. ಹಾಗೂ ತೃತೀಯ 4000 ರೂ. ನಗದು ಬಹುಮಾನ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಗುಂಪು ಕ್ರೀಡೆಯಲ್ಲಿ ವಿಜೇತರಾದವರಿಗೆ ಪ್ರಥಮ 24000 ರೂ. ದ್ವಿತೀಯ 18000 ರೂ. ಹಾಗೂ ತೃತೀಯ 8000 ರೂ. ನಗದು ಬಹುಮಾನ ನೀಡಬೇಕಿತ್ತು. ವೈಯಕ್ತಿಕವಾಗಿ ಸ್ಪರ್ಧೆಮಾಡಿದ್ದ ಕ್ರೀಡೆಗಳಿಗೂ ಕೂಡ ನಗದು ಬಹುಮಾನ ನೀಡಬಾಕಾಗಿತ್ತು. ಈ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕ್ರೀಡಾಕೂಟ ನಡೆದು 6 ತಿಂಗಳು ಕಳೆದರು ನಗದು ಬಹುಮಾನವನ್ನು ನೀಡಿಲ್ಲ. ಎಲ್ಲಾ ಕ್ರೀಡಾಪಟುಗಳ ಪಟ್ಟಿ ಹಾಗೂ ಬ್ಯಾಂಕ್ ಖಾತೆಯ ವಿವರವನ್ನು ಪಡೆದುಕೊಂಡಿದ್ದರು, ಈವರೆಗೂ ಅವರಿಗೆ ನಗದು ಬಹುಮಾನ ಜಮಾ ಮಾಡಿಲ್ಲ ಎಂದು ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
1003 ಕ್ರೀಡಾಪಟುಗಳಿಗೆ ಬರಬೇಕು ನಗದು ಬಹುಮಾನ:
ಜಿಲ್ಲಾ ಮಟ್ಟದಲ್ಲಿ ಜ.11 ರಂದು ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ತಾಲೂಕು ಮಟ್ಟದಿಂದ ಆಯ್ಕೆಯಾದ ಕ್ರೀಡಾಪಟುಗಳು ಭಾಗವಹಿಸಿ, 116 ಪುರುಷರು ಹಾಗೂ 89 ಮಹಿಳೆಯರು ವಿಭಾಗಮಟ್ಟ ಹಾಗೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಜಿಲ್ಲೆ ಮತ್ತು ತಾಲೂಕು ಮಟ್ಟದಿಂದ ಸ್ಪರ್ಧೆಮಾಡಿ ವಿಜೇತರಾದ ಒಟ್ಟು 1003 ಕ್ರೀಡಾಪಟುಗಳಿಗೆ ನಗದು ಬಹುಮಾನವನ್ನು ಕ್ರೀಡಾ ಇಲಾಖೆ ನೀಡಬೇಕಿದೆ. ಜಿಲ್ಲಾ ಪಂಚಾಯತ್ ಅನುದಾನದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ, ಊಟದ ವ್ಯವಸ್ಥೆ, ಪ್ರಶಸ್ತಿ ಪತ್ರ ಮತ್ತು ಪಾರಿತೋಷಕಗಳನ್ನು ನೀಡಿದ್ದು, ನಗದು ಬಹುಮಾನವನ್ನು ಈ ವರೆಗೂ ಕ್ರೀಡಾ ಇಲಾಖೆ ಬಿಡುಗಡೆ ಮಾಡಿಲ್ಲ ಎಂದು ಕ್ರೀಡಾ ಪಟುಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕ್ರೀಡಾ ಇಲಾಖೆಯ ನಿರ್ಲಕ್ಷ:
ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳು ಮಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲೂ ಭಾಗವಹಿಸಿ ವಿಜೇತರಾಗಿದ್ದಾರೆ. ಅವರಿಗೂ ಇಲಾಖೆ ನಗದು ಬಹುಮಾನ ವಿತರಣೆ ಮಾಡದೇ ಇರುವುದು, ಯುವ ಸಬಲೀಕರಣ ಕ್ರೀಡಾ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಕ್ರೀಡಾಪಟುಗಳು ಆರೋಪಮಾಡಿದ್ದಾರೆ. ಕ್ರೀಡಾಪಟುಗಳ ವಿವರಣೆ ಹಾಗೂ ಬ್ಯಾಂಕ್ ಮಾಹಿತಿಯನ್ನು ೆ.23 ರಲ್ಲೇ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಿಗೆ ಸಲ್ಲಿಸಲಾಗಿದ್ದು, ಇನ್ನು ಅನುದಾನ ಬಿಡುಗಡೆ ಮಾಡಿಲ್ಲ. ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿದರೆ ತಕ್ಷಣ ಕ್ರೀಡಾಪಟುಗಳ ಖಾತೆಗೆ ಜಮಾ ಮಾಡಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರಮೋದ್ ಕುಮಾರ್ ಮಾಹಿತಿ ನೀಡಿದರು.
ನಮಗೆ ಯಾವುದೇ ತರಹದ ಮೂಲಭೂತ ಸೌಕರ್ಯಗಳು ಇಲ್ಲದೇ ಇದ್ದರೂ, ಕಷ್ಟಪಟ್ಟು ತರಬೇತ ಪಡೆದು ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿದ್ದೇವೆ. ಕ್ರೀಡಾಕೂಟ ನಡೆದು 6 ತಿಂಗಳಾದರೂ ನಗದು ಬಹುಮಾನ ನೀಡಿಲ್ಲ.
ಪಿ.ಸಂಜನಾ, ಕ್ರೀಡಾಪಟು, ಕೆಸ್ತೂರು, ಯಳಂದೂರು.
ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳ ವರದಿಯನ್ನು ಇಲಾಖೆಗೆ ಕಳುಹಿಸಿಕೊಡಲಾಗಿದೆ. ಅನುದಾನ ಬಿಡುಗಡೆ ಮಾಡಿದರೆ ಕ್ರೀಡಾಪಟುಗಳ ಖಾತೆಗೆ ಜಮಾ ಮಾಡಲಾಗುತ್ತದೆ.
ಜೆ.ಪ್ರಮೋದ್ ಕುಮಾರ್, ಪ್ರಭಾರ ಉಪನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮರಾಜನಗರ.