ಚಾಮರಾಜನಗರ: ಅತ್ತ ಸರ್ಕಾರಿ ಕೆಲಸವೂ ಇಲ್ಲದೆ, ಇತ್ತ ಹೊರಗುತ್ತಿಗೆ ನೌಕರಿಗೆ ಸಂಬಳವೂ ಸಿಗದೆ ಆಕ್ಸಿಜನ್ ದುರಂತ ಸಂತ್ರಸ್ತರು ಅತಂತ್ರರಾಗಿದ್ದಾರೆ.
ಕರೋನಾ ಸಂದರ್ಭದಲ್ಲಿ ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ್ದ ಆಕ್ಸಿಜನ್ ದುರಂತದಲ್ಲಿ ಮೃತಪಟ್ಟವರಿಗೆ ಕಾಂಗ್ರೆಸ್ ನೀಡಿದ್ದ ಸರ್ಕಾರಿ ಉದ್ಯೋಗದ ಭರವಸೆ ಇನ್ನೂ ಈಡೇರಿಲ್ಲ. ತಾತ್ಕಾಲಿಕವಾಗಿ ಕೊಟ್ಟಿರುವ ಹೊರಗುತ್ತಿಗೆ ನೌಕರರಿಗೆ 4 ತಿಂಗಳಿನಿಂದ ಸಂಬಳವೂ ಬಂದಿಲ್ಲ.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಆಕ್ಸಿಜನ್ ದುರಂತ ಸಂತ್ರಸ್ತರ ಸಭೆಯನ್ನು ಮುಂದೂಡಲಾಯಿತು. ದೂರದ ಊರುಗಳಿಂದ ಬಂದಿದ್ದ ಸಂತ್ರಸ್ತರು ಎಸ್‌ಡಿಪಿಐನ ನಗರಸಭೆ ಸದಸ್ಯರಾದ ಮಹೇಶ್ ಗಾಳೀಪುರ, ಕಲೀಲ್‌ವುಲ್ಲಾ ಅವರ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರನ್ನು ಭೇಟಿ ಮಾಡಿದರು. ಇವರೊಂದಿಗೆ ಮಾತುಕತೆ ನಡೆಸಿದ ಎಡಿಸಿ ಗೀತಾ, ಹೊರಗುತ್ತಿಗೆ ಏಜೆನ್ಸಿ ತೆಗೆದುಕೊಂಡಿರುವವರು ಮತ್ತು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್‌ಗೆ ಸ್ಥಳದಲ್ಲೇ ಕರೆ ಮಾಡಿ ವೇತನ ನೀಡದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ಕೂಡಲೇ ಸಂಬಳ ನೀಡಿ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುವಂತೆ ಎಲ್ಲರಿಗೂ ತಿಳಿಸಿದರು. ಇದಕ್ಕೆ ಸಂತ್ರಸ್ತರು ಒಪ್ಪಲಿಲ್ಲ. ವೇತನಕ್ಕೆ ತಕ್ಕಂತೆ ಹೊರಗುತ್ತಿಗೆ ನೌಕರಿ ನೀಡಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಡಿ ಗ್ರೂಪ್ ಕೆಲಸ ಮಾಡಲು ಯಾರೂ ಸಿದ್ಧವಿಲ್ಲ ಎಂದು ಹೇಳಿದರು. ಎಲ್ಲರ ಪ್ರತಿಕ್ರಿಯೆ ಆಲಿಸಿದ ಎಡಿಸಿ ಗೀತಾ ಹುಡೇದ, ನಿಗದಿತ ದಿನದಂದು ವೇತನ ಪಡೆಯುತ್ತಿರುವವರು ಅಲ್ಲೇ ಕೆಲಸ ಮುಂದುವರಿಸಿ. ಸಂಬಳ ಸಿಗದಿರುವವರು ಜಿಲ್ಲಾಸ್ಪತ್ರೆಗೆ ಹೋಗಿ ಸಿಮ್ಸ್ ಡೀನ್ ಡಾ.ಮಂಜುನಾಥ್ ಅವರನ್ನು ಭೇಟಿ ಮಾಡಿ ಎಂದರು.
ಸಭೆಯಲ್ಲಿ ಸಂತ್ರಸ್ತರಾದ ಜ್ಯೋತಿ, ಚವಿತ್ರಾ, ಪುಷ್ಪಾ, ಕಾವ್ಯ, ಸುಶೀಲಾ, ನಾಗರತ್ನಾ ಸೇರಿದಂತೆ 15ಕ್ಕೂ ಹೆಚ್ಚು ಜನರು ಇದ್ದರು.
ನುಡಿದಂತೆ ನಡೆಯದ ಅಧಿಕಾರಿಗಳು
ಹೊರಗುತ್ತಿಗೆ ನೌಕರಿ ಮಾಡುತ್ತಿರುವ ಆಕ್ಸಿಜನ್ ದುರಂತ ಸಂತ್ರಸ್ತರಿಗೆ ಎರಡು ದಿನಗಳಲ್ಲಿ ಸಂಬಳ ಕೊಡಿಸುವುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಕೊಟ್ಟ ಭರವಸೆಯನ್ನು ಇನ್ನೂ ಈಡೇರಿಸಿಲ್ಲ. ಜೂ.22ರಂದು ಕೆಲಸ ಕೊಟ್ರು, ಸಂಬಳ ಮಾತ್ರ ಕೊಡ್ತಿಲ್ಲ ಶೀರ್ಷಿಕೆಯಡಿ ವಿಜಯವಾಣಿ ವರದಿ ಪ್ರಕಟಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಎಡಿಸಿ ಇವತ್ತೋ ಅಥವಾ ನಾಳೆಯೋ ಸಂಬಳ ಬರಬಹುದು ಎಂದಿದ್ದರು. ಜೂ.24ರಂದು ಸಚಿವರಾದ ಕೆ.ವೆಂಕಟೇಶ್, ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂತ್ರಸ್ತರಿಗೆ ಸಂಬಳ ಕೊಡಿಸಿ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಸೂಚನೆ ನೀಡಿದ್ದರು. ಆಗ ಡಿಸಿ ಶಿಲ್ಪಾನಾಗ್ ಮತ್ತು ಎಡಿಸಿ ಗೀತಾ ಹುಡೇದ ಪ್ರತಿಕ್ರಿಯಿಸಿ, ಸಂಬಳ ಕೊಡಿಸುವುದಾಗಿ ಹೇಳಿದ್ದರು. ಮೂರು ತಿಂಗಳಿನಿಂದ ಸಂಬಳವಿಲ್ಲದೆ ಕೆಲಸ ಮಾಡುತ್ತಿರುವ ಸಂತ್ರಸ್ತರು ಇದೀಗ ನಾಲ್ಕನೇ ತಿಂಗಳಿಗೆ ಕಾಲಿಟ್ಟಿದ್ದಾರೆ. ಸಂತ್ರಸ್ತರು ಸಂಬಳ ಕೊಡಿಸಿ ಎಂದು ಅಧಿಕಾರಿಗಳನ್ನು ಕೇಳಿಕೊಳ್ಳುವ ಸ್ಥಿತಿಗೆ ಬಂದು ನಿಂತಿದ್ದಾರೆ.