ಚಾಮರಾಜನಗರ : ಕಾಡಾನೆಗಳು ನಾಡಿಗೆ ಲಗ್ಗೆ ಇಡುವುದು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದರಿಂದ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯುಂಟಾಗುತ್ತಿದೆಯಲ್ಲದೆ ಹಲವು ಸಮಸ್ಯೆಗಳೂ ಕಂಡುಬರುತ್ತಿದೆ.
ಜಿಲ್ಲೆಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿಗಿರಿರಂಗಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಒಳಗೊಂಡಂತೆ ಮಲೈ ಮಹದೇಶ್ವರ ಹಾಗೂ ಕಾವೇರಿ ಅಭಯಾರಣ್ಯ ವ್ಯಾಪಿಸಿಕೊಂಡಿದೆ. ಚಾಮರಾಜನಗರ, ಹನೂರು, ಗುಂಡ್ಲುಪೇಟೆ, ಕೊಳ್ಳೇಗಾಲ ಹಾಗೂ ಯಳಂದೂರು ತಾಲೂಕಿನಲ್ಲಿರುವ ಕಾಡಂಚಿನ ಗ್ರಾಮಗಳಲ್ಲಿ ಆನೆ ಹಾವಳಿ ನಿತ್ಯವೂ ವರದಿಯಾಗುತ್ತಲೇ ಇದೆ. ಕಾಡಿನಿಂದ ನಾಡಿಗೆ ದಾಂಗುಡಿಯಿಡುವ ಆನೆಗಳು ತೆಂಗು, ಅಡಕೆ, ಬಾಳೆ, ಜೋಳ, ಹಲಸು ಸೇರಿದಂತೆ ಇತರ ಬೆಳೆಗಳನ್ನು ಹಾನಿ ಮಾಡುವುದರ ಜತೆಗೆ ನಿರಂತರವಾಗಿ ಕಾಡಂಚಿನ ಗ್ರಾಮದ ಜನರಿಗೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತಿವೆ.
ಹಲವೆಡೆ ಆನೆ ಮತ್ತು ಮಾನವ ಸಂಘರ್ಷದಿಂದ ರೈತರು ಹಾಗೂ ಸಾಮಾನ್ಯ ಜನರು ಮೃತಪಟ್ಟಿರುವ ಉದಾಹರಣೆಗಳು ಇದೆ. ಕಾಡಂಚಿನ ಗ್ರಾಮಗಳಲ್ಲಿ ಆನೆ ಹಾವಳಿಯನ್ನು ತಪ್ಪಿಸುವ ಉದ್ದೇಶದಿಂದ ಅರಣ್ಯ ಇಲಾಖೆಯವರು ರೈಲು ಕಂಬಿಗಳನ್ನು ಅಳವಡಿಸುವುದು, ಸೋಲಾರ್ ಬೇಲಿ ಹಾಕುವುದು, ಅರಣ್ಯದಂಚಿನಲ್ಲಿ ಬೃಹತ್ ಟ್ರಂಚ್‌ಗಳನ್ನು ಹೊಡೆಸುವ ಪ್ರಯತ್ನಗಳನ್ನು ಮಾಡುತ್ತಿದೆ. ಈ ಎಲ್ಲ ತಡೆಗಳನ್ನು ಲೆಕ್ಕಿಸದ ಆನೆಗಳು ಉಪಾಯವಾಗಿ ಕಾಡಿನಿಂದ ನಾಡಿಗೆ ನುಗ್ಗುವುದನ್ನು ಮುಂದುವರಿಸುತ್ತಿದೆ. ಇದರಿಂದಾಗಿ ಬೆಳೆ ಹಾನಿಯಲ್ಲದೇ ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗಳಿಗೂ ಹಾನಿಯಾಗುತ್ತಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಆನೆ ಹಾವಳಿ ತಡೆಗೆ ಶಾಶ್ವತ ಪರಹಾರ ಕಂಡುಹಿಡಿಯಬೇಕಿದೆ.