ಜಿಲ್ಲೆ

ಹುಲಿ ಬಂತು ಹುಲಿ ಕಥೆ!

ಕಿರಣ್ ಮಾದರಹಳ್ಳಿ ಚಾಮರಾಜನಗರ
ವ್ಯಾಘ್ರಗಳ ನೆಲೆ ಬೀಡಾಗಿರುವ ಜಿಲ್ಲೆಯಲ್ಲಿ ಆಗಾಗ್ಗೆ ಕೇಳಿಬರುವ ಹುಲಿ ಬಂತು ಹುಲಿ ಕಥೆಗೆ ಜನರು ಬೆಸ್ತು ಬೀಳುತ್ತಲೇ ಇರಬೇಕಾಗಿದೆ.
ಜಿಲ್ಲೆಯು ಭಾಗಶಃ ಅರಣ್ಯ ಪ್ರದೇಶದಿಂದ ಕೂಡಿದ್ದು, ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ, ಮಲೆ ಮಹದೇಶ್ವರ ವನ್ಯಜೀವಿ ಧಾಮ, ಕಾವೇರಿ ವನ್ಯಜೀವಿ ಧಾಮವಿದೆ. ಈ ಕಾಡು ಅಪಾರ ವನ್ಯಜೀವಿಗಳ ಆವಾಸ ಸ್ಥಳವಾಗಿದೆ. ಇಲ್ಲಿ ಹುಲಿಗಳ ಸಂಖ್ಯೆಯೂ ಗಣನೀಯವಾಗಿ ಇದ್ದು, ಹುಲಿ ಕಾಡಿನಿಂದ ನಾಡಿಗೆ ಬಂದು ಭೀತಿ ಹುಟ್ಟಿಸಿದ ಉದಾಹರಣೆಗಳೂ ಸಾಕಷ್ಟಿವೆ. ಮತ್ತೊಂದೆಡೆ ಎಲ್ಲಿಯದೋ ಹುಲಿ ಸಂಚಾರ ಮಾಡಿದ ವಿಡಿಯೋಗಳು ಜಿಲ್ಲೆಯಲ್ಲಿ ವೈರಲ್ ಆಗಿ ಹುಲಿ ಬಂತು ಹುಲಿ ಕಥೆ ಸೃಷ್ಟಿಯಾಗುತ್ತಿದೆ. ಇದನ್ನು ನಿಜವೆಂದು ನಂಬುವ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ.

ತಾಜಾ ಉದಾಹರಣೆ
ಹುಲಿ ಕಾಣಿಸಿಕೊಂಡ ಫೇಕ್ ವಿಡಿಯೋಗಳು ವೈರಲ್ ಆಗಿ ಜನರಲ್ಲಿ ಭಯ ಹುಟ್ಟಿಸಿರುವುದಕ್ಕೆ ಹಲವು ಉದಾಹರಣೆಗಳಿವೆ. ಇವುಗಳಲ್ಲಿ ಇತ್ತೀಚೆಗೆ ವೈರಲ್ ಆದ ಎರಡು ವಿಡಿಯೋಗಳು ಹತ್ತಿರದ ಸಾಕ್ಷಿಗಳಾಗಿವೆ. ಚಾಮರಾಜನಗರ ತಾಲೂಕಿನ ತಾವರಕಟ್ಟೆಮೋಳೆ ಗ್ರಾಮದ ಹೊಲ ಮತ್ತು ಕರಿವರದರಾಜಸ್ವಾಮಿ ಬೆಟ್ಟದ ಸುತ್ತಮುತ್ತ ಹುಲಿ ಓಡಾಡುತ್ತಿದೆ ಎಂಬ ವದಂತಿ ಹಬ್ಬಿತ್ತು. ಕರಿವರದರಾಜಸ್ವಾಮಿ ಬೆಟ್ಟವನ್ನೇ ಹೋಲುವ ಸ್ಥಳದಲ್ಲಿ ಹುಲಿ ಕಾಣಿಸಿದ್ದ ಎಲ್ಲಿಯದೋ ವಿಡಿಯೋವನ್ನು ಇಲ್ಲಿಯದೆಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ಇದೇ ರೀತಿ ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿರುವ ಎಲ್ಲೇಮಾಳದ ಬಳಿ ಹುಲಿ ಸಂಚಾರ ಮಾಡಿದೆ ಎಂಬ ವಿಡಿಯೋ ಕೂಡ ವೈರಲ್ ಆಗಿದೆ. ಇದು ಇಲ್ಲಿಯದೋ ಅಥವಾ ಬೇರೆ ಕಡೆಯದ್ದೋ ಎನ್ನುವುದನ್ನು ಅರಣ್ಯ ಇಲಾಖೆ ಖಚಿತಪಡಿಸಿಲ್ಲ.

ಒಬ್ಬರಿಂದ ಮತ್ತೊಬ್ಬರಿಗೆ ರವಾನೆ
ಯಾವುದೋ ರಾಜ್ಯದಲ್ಲಿ ಹುಲಿ ಓಡಾಡುವ ವಿಡಿಯೋ ಶೇರ್ ಆಗುವ ಮೂಲಕ ಜಿಲ್ಲೆಯನ್ನು ತಲುಪುತ್ತಿದೆ. ಅವುಗಳನ್ನು ಇಲ್ಲಿಯದೇ ಇರಬೇಕೆಂದು ಮತ್ತಷ್ಟು ಜನರು ಶೇರ್ ಮಾಡುತ್ತಾರೆ. ವನ್ಯಜೀವಿಗಳ ಬಗೆಗಿನ ವಿಡಿಯೋಗಳು ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದಿದ್ದರೂ ಅವುಗಳನ್ನು ಜಿಲ್ಲೆಗೆ ತಳುಕು ಹಾಕಲಾಗುತ್ತಿದೆ. ಖಚಿತವಲ್ಲದ ಮಾಹಿತಿ ಒಬ್ಬರಿಂದ ಮತ್ತೊಬ್ಬರಿಗೆ ರವಾನೆಯಾಗುತ್ತಿದೆ.

ಇದಕ್ಕೂ ಇದೆ ಕಾರಣ: ಎಲ್ಲಿಯದೋ ವಿಡಿಯೋ ಇಲ್ಲಿ ವೈರಲ್ ಆಗಲು ಕೆಲವು ಕಾರಣಗಳಿವೆ. ಜಿಲ್ಲೆಯ ಕಾಡಂಚಿನ ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡ ಉದಾಹರಣೆಗಳಿವೆ. ಈ ವಿಷಯ ಜನರ ಬಾಯಿಂದ ಬಾಯಿಗೆ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಹುಲಿಯ ವಿಡಿಯೋ ವೈರಲ್ ಆದಾಗ ಜನರು ಇದನ್ನೆಲ್ಲ ನಂಬುತ್ತಿದ್ದಾರೆ. ವಿಡಿಯೋದಲ್ಲಿ ಕಾಣುವ ಸ್ಥಳ ಜಿಲ್ಲೆಯ ಯಾವುದಾದರೂ ಒಂದು ಪ್ರದೇಶಕ್ಕೆ ಹೋಲುವುದಾದರೆ ಅಲ್ಲೇ ಹುಲಿ ಕಾಣಿಸಿದ್ದು ಎಂದು ಸುದ್ದಿ ಹಬ್ಬಿಸಲಾಗುತ್ತಿದೆ.

ಆತಂಕ ಸೃಷ್ಟಿ
ಹುಲಿ ಓಡಾಡುವ ಫೇಕ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರು ಆತಂಕಕ್ಕೆ ಒಳಗಾಗುತ್ತಿದ್ದಾರೆ. ನಮ್ಮೂರ ಹತ್ತಿರ ಹುಲಿ ಕಾಣಿಸಿಕೊಂಡಿದೆ. ಇದಕ್ಕೆ ವಿಡಿಯೋ ಸಾಕ್ಷಿ ಇದೆ ಎಂದು ನಂಬುತ್ತಿದ್ದಾರೆ. ವ್ಯವಸಾಯ ಮಾಡಲು ಜಮೀನುಗಳಿಗೆ ಹೋಗುವವರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಿದ್ದು, ಜಮೀನಿಗೆ ಹೋದವರು ಮನೆಗೆ ಹಿಂದಿರುಗುವವರೆಗೂ ಕುಟುಂಬಸ್ಥರು ಆತಂಕದಲ್ಲಿ ಇರುತ್ತಿದ್ದಾರೆ. ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಭಯದಲ್ಲೇ ಸಂಚಾರ ಮಾಡುತ್ತಿದ್ದಾರೆ.
ನಗರದ ಕರಿವರದರಾಜ ವೃಕ್ಷವನಕ್ಕೆ ಪ್ರತಿದಿನ ಮುಂಜಾನೆ ಹಲವರು ವಾಯು ವಿಹಾರಕ್ಕೆ ಹೋಗುತ್ತಾರೆ. ಇಲ್ಲೂ ಹುಲಿ ಇದೆ… ಚಿರತೆ ಇದೆ ಎಂಬ ವದಂತಿ ಹಬ್ಬಿದ ಪರಿಣಾಮ ವಾಯುವಿಹಾರಿಗಳ ಸಂಖ್ಯೆ ಕಡಿಮೆಯಾಯಿತು.

ಕಾಡಿನಂತೆ ಮೌನಿಯಾದರೆ ಹೇಗೆ?
ಕಾಡು ಕಡು ಮೌನಿ. ಕಾಡನ್ನು ನೋಡಲು ಹೋದವರಲ್ಲೂ ಮೌನ ಆವರಿಸಿ ಬಿಡುತ್ತದೆ. ಇದನ್ನು ಕಾಯುತ್ತಿರುವ ಅರಣ್ಯ ಇಲಾಖೆ ಮಾತನಾಡಬೇಕಾದ ಸಂದರ್ಭದಲ್ಲಿ ಮಾತನಾಡದೆ ಮೌನ ವಹಿಸಿಬಿಡುತ್ತದೆ. ವಿಡಿಯೋ ವೈರಲ್ ಆದ ತಕ್ಷಣ ಅದರ ಅಸಲಿಯತ್ತನ್ನು ಜನರಿಗೆ ತಿಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಇದ್ದುಕೊಂಡು ಅದರಲ್ಲಿ ಸಂದೇಶ ರವಾನೆ ಮಾಡಿ ಫೇಕ್ ವಿಡಿಯೋಗಳು ಯಾವುದು ಎನ್ನುವುದನ್ನು ಖಚಿತಪಡಿಸಬೇಕು. ಹೀಗೆ ಮಾಡಿದರೆ ನಕಲಿ ಅಥವಾ ಅಸಲಿ ಸತ್ಯ ಜನರಿಗೆ ತಿಳಿಯುತ್ತದೆ.

ಅರಣ್ಯ ಇಲಾಖೆಗೆ ಅನುಕೂಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳು ಕಾಣಿಸಿಕೊಂಡರೆ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತಾರಣ್ಯ ಪ್ರದೇಶ ಮಾಡಲು ಪ್ರಯತ್ನಿಸುತ್ತಿರುವ ಅರಣ್ಯ ಇಲಾಖೆಗೆ ಅನುಕೂಲವಾಗಲಿದೆ. ಮಲೆ ಮಹದೇಶ್ವರ ವನ್ಯಜೀವಿಧಾಮ ಹುಲಿ ಸಂರಕ್ಷಿತಾರಣ್ಯ ಪ್ರದೇಶವಾದರೆ ಜಿಲ್ಲೆಯ ಮೂರನೇ ಹುಲಿ ಯೋಜನೆ ಪ್ರದೇಶವಾಗಲಿದೆ. ಆದರೆ ಇದಕ್ಕೆ ಸ್ಥಳೀಯರ ವಿರೋಧವಿದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಸೋಮಣ್ಣ ಮಲೆ ಮಹದೇಶ್ವರ ವನ್ಯಜೀವಿಧಾಮವನ್ನು ಹುಲಿ ಸಂರಕ್ಷಿತಾರಣ್ಯ ಪ್ರದೇಶ ಮಾಡಲು ಒಪ್ಪಿರಲೇ ಇಲ್ಲ. ಅಪಾರ ಭಕ್ತರು ಬರುವ ಪ್ರದೇಶಕ್ಕೆ ಕಾನೂನು ಅಡೆತಡೆ ತರಬೇಡಿ ಎಂದಿದ್ದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವನ್ಯಜೀವಿಗಳ ವಿಡಿಯೋವನ್ನು ಖಚಿತಪಡಿಸಲೂ ಬಹುದು, ಕೆಲವೊಮ್ಮೆ ಆಗದೆಯೂ ಇರಬಹುದು. ಎಲ್ಲೇಮಾಳದಲ್ಲಿ ಹುಲಿ ಕಾಣಿಸಿಕೊಂಡಿತ್ತು ಎನ್ನಲಾದ ವಿಡಿಯೋ ಮಧುಮಲೈ ಅರಣ್ಯ ಪ್ರದೇಶದ್ದು ಎಂದು ಹೇಳುತ್ತಿದ್ದಾರೆ.ಡಾ.ಸಂತೋಷ್‌ಕುಮಾರ್, ಮಲೆ ಮಹದೇಶ್ವರ ವನ್ಯಜೀವಿಧಾಮ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವನ್ಯಜೀವಿಗಳ ವಿಡಿಯೋಗಳು ಅಸಲಿಯೋ ಅಥವಾ ನಕಲಿಯೋ ಎಂದು ಅರಣ್ಯ ಇಲಾಖೆ ತಿಳಿಸಬೇಕು. ಸಾಮಾಜಿಕ ಜಾಲತಾಣಗಳ ಬಳಕೆ ಅತಿಯಾಗಿರುವ ಈ ದಿನಗಳಲ್ಲಿ ಅವುಗಳ ಮೂಲಕವೇ ಜನರಿಗೆ ಅರಿವು ಮೂಡಿಸಬೇಕು. ಆಗ ಎಲ್ಲೋ ಕಂಡ ಹುಲಿ ನಮ್ಮೂರಲ್ಲಿ ಓಡಾಡಿತು ಎನ್ನುವ ಆತಂಕ ದೂರವಾಗುತ್ತದೆ. ಕೆಲವೊಮ್ಮೆ ಸತ್ಯವಾಗಿದ್ದರೆ ಜನರ ಪ್ರಾಣ ರಕ್ಷಣೆಗೂ ನೆರವಾಗುತ್ತದೆ.ಪ್ರಶಾಂತ್, ನಾಗವಳ್ಳಿ ನಿವಾಸಿ