ಚಾಮರಾಜನಗರ: ಶೀಘ್ರದಲ್ಲೇ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಸಂಬಂಧ ಸಮಗ್ರ ಕಾಯ್ದೆ ರೂಪಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಮುಂಭಾರ ಜಮಾಯಿಸಿದ ಪ್ರತಿಭಟನಾಕಾರರು, ವಿವಿಧ ೋಷಣೆಗಳನ್ನು ಕೂಗಿ, ಭಿತ್ತಿ ಪತ್ರಗಳನ್ನು ಹಿಡಿದು ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ನವೀನ್‌ಕುಮಾರ್ ಮಾತನಾಡಿ, ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946 ಅನ್ವಯ ರಾಜ್ಯ ಸರ್ಕಾರ ಬಿಲಿಷ್ಠವಾದ ಕಾನೂನು ರೂಪಿಸಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸಬೇಕು. ಎಲ್ಲ ಖಾಸಗಿ ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಶೇ.100 ರಷ್ಠು ಹುದ್ದೆಗಳು ಕನ್ನಡಿಗರಿಗೆ ಮೀಸಲಿಡಬೇಕು. ಎಲ್ಲಾ ಖಾಸಗಿ ಸಂಸ್ಥೆಗಳ ಇತರ ಹುದ್ದೆಗಳಲ್ಲಿ ಶೇ.80ರಷ್ಠು ಹುದ್ದೆಗಳನ್ನು ಕನ್ನಡಗರಿಗೆ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ನೀಡಿರುವ ಮಾನ್ಯತೆ ರದ್ದುಗೊಳಿಸಿ ಅವುಗಳಿಗೆ ಭೂಮಿ ನೀಡಲಾಗಿದ್ದರೆ ವಾಪಸ್ ಪಡೆಯಬೇಕು. ಎಲ್ಲಾ ಸವಲತ್ತುಗಳನ್ನು ಹಿಂದಕ್ಕೆ ಪಡೆಯುವ ನಿಮಯವನ್ನು ರೂಪಿಸಬೇಕು. ನಿಮಯಾವಳಿ ಪಾಲಿಸದ ಸಂಸ್ಥೆಗಳಿಗೆ ದಂಡ ವಿಧಿಸಬೇಕು ಮತ್ತು ಕ್ರಿಮಿನಲ್ ಮೊಕದ್ದೆಮೆ ಹೂಡಬೇಕು. ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಅದರಂತೆ ಜಿಲ್ಲೆಯಲ್ಲೂ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನಮ್ಮ ಬೇಡಿಕೆಗಳ ಈಡೇರಿಕೆಗೆ ಹಂತಹಂತವಾಗಿ ಹೋರಾಟ ಮಾಡಲಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಕರವೇ ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಸುರೇಶ್‌ನಾಯಕ, ಉಪಾಧ್ಯಕ್ಷ ಮಂಜೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂತ್‌ನಾಗ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ಸಂಜಯ್, ಪ್ರಮೋದ್, ರಾಘವೇಂದ್ರ, ಭರತ್, ರಾಜೇಂದ್ರ, ಕೃಷ್ಣಮೂರ್ತಿ, ಮಹದೇವಸ್ವಾಮಿ, ಗುರುಪ್ರಸಾದ್, ಆನಂದ್, ಮಹದೇವಪ್ರಸಾದ್, ಜಗದೀಶ್ ಹಾಗೂ ಇತರರು ಭಾಗವಹಿಸಿದ್ದರು.