ಜಿಲ್ಲೆ

ಹೊನ್ನಹಳ್ಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಎ.ಎಸ್.ಮಣಿಕಂಠ

ಚಾಮರಾಜನಗರ: ತಾಲೂಕಿನ ಹೊನ್ನಹಳ್ಳಿ ಗ್ರಾಮಪಂಚಾಯಿತಿ ಅಧಿಕಾರ ಮತ್ತೇ ಬಿಜೆಪಿ ಬೆಂಬಲಿಗರ ಪಾಲಾಗಿದ್ದು, ಅಧ್ಯಕ್ಷರಾಗಿ ಎನ್. ರವಿಕುಮಾರ್, ಉಪಾಧ್ಯಕ್ಷರಾಗಿ ಮಂಜುಳಾ ಆಯ್ಕೆಯಾದರು.

ಗ್ರಾಪಂ ಅಧ್ಯಕ್ಷರಾಗಿದ್ದ ಮಲ್ಲೇಶ್, ಉಪಾಧ್ಯಕ್ಷರಾಗಿದ್ದ ಶಿವಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿಗರಾಗಿ ಎನ್. ರವಿಕುಮಾರ್, ಕಾಂಗ್ರೆಸ್‌ನಿಂದ ಚನ್ನಪ್ಪನಪುರ ಪ್ರಸಾದ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಾ, ಮಂಗಳಮ್ಮ ಸ್ಪರ್ಧೆ ಮಾಡಿದ್ದರು. 14 ಸದಸ್ಯ ಬಲದಲ್ಲಿ ಸಭೆಗೆ 12 ಸದಸ್ಯರು ಹಾಜರಾಗಿದ್ದು, ಇಬ್ಬರು ಸದಸ್ಯರು ಗೈರಾಗಿದ್ದರು. ಬಳಿಕ ಮತದಾನ ನಡೆದು ಎನ್. ರವಿಕುಮಾರ್ ಹಾಗೂ ಮಂಜುಳಾ ಅವರು ತಲಾ 7 ಮತಗಳನ್ನು ಪಡೆದು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಪ್ರಸಾದ್ ಮತ್ತು ಮಂಗಳಮ್ಮ ಅವರು ಐದು ಮತಗಳನ್ನು ಪಡೆದುಕೊಂಡಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ವಿಶ್ವನಾಥ್ ಅಧಿಕೃತವಾಗಿ ಘೋಷಣೆ ಮಾಡಿದರು.

ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿಗರು ಆಯ್ಕೆಯಾಗುತ್ತಿದ್ದಂತೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಗ್ರಾಪಂ ಸದಸ್ಯರಾದ ಅಮೃತ, ಶಿವಮ್ಮ, ದೇವಶೆಟ್ಟಿ, ಸುಂದ್ರಮ್ಮ, ಶಂಕರಗುರು, ಕಾಂತರಾಜು, ಮಹದೇವಮ್ಮ ಹಾಗೂ ಪಿಡಿಓ ಲಕ್ಷ್ಮಣನಾಯಕ್ ಉಪಸ್ಥಿತರಿದ್ದರು.