ಜಿಲ್ಲೆ

ಕಂಟಕ ನಿವಾರಿಸುವ ಜಲಕಂಠೇಶ್ವರ

ಹನೂರು: ತಾಲೂಕಿನ ಶಾಗ್ಯ ಗ್ರಾಮದ ಹೊರ ವಲಯದಲ್ಲಿ ಸುಮಾರು 800 ವರ್ಷಗಳ ಹಿಂದೆ ಪಾಳೇಗಾರರ ಆಳ್ವಿಕೆಯ ಕಾಲದಲ್ಲಿ ನಿರ್ಮಿತವಾದ ಶ್ರೀ ಜಲಕಂಠೇಶ್ವರಸ್ವಾಮಿ ದೇಗುಲ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇದು ಭಕ್ತರ ಪಾಲಿನ ಶ್ರದ್ಧಾಕೇಂದ್ರವಾಗಿ ಖ್ಯಾತವಾಗಿದೆ. ಯಾವುದೇ ಸಮಸ್ಯೆ, ಕಂಟಕ ಎದುರಾದರೂ ಈ ಭಾಗದ ಭಕ್ತರು ಸನ್ನಿಧಿಗೆ ಬಂದು ಪೂಜೆ ಸಮರ್ಪಿಸುತ್ತಾರೆ. ಜಲಕಂಠೇಶ್ವರನು ಕಂಟಕ ನಿವಾರಿಸುತ್ತಾನೆ, ಜೀವನವನ್ನು ಪಾವನಗೊಳಿಸುತ್ತಾನೆ ಎಂಬ ಅಪಾರ ನಂಬಿಕೆ ಭಕ್ತರಲ್ಲಿದೆ.

ಐತಿಹಾಸಿಕ ಹಿನ್ನೆಲೆ: ಸಂಪೂರ್ಣ ಕಾಡಿನಿಂದ ಆವೃತವಾಗಿದ್ದ ಶಾಗ್ಯ ಭಾಗಕ್ಕೆ ಉತ್ತರ ಸೀಮೆಯಿಂದ ಮಹಾನ್ ಭಕ್ತನೊಬ್ಬನು ಕುದುರೆಯ ಮೇಲೆ ಬಂದು ತಪಸ್ಸಿಗೆ ಕುಳಿತನಂತೆ. ಇದು ಒಣ ಪ್ರದೇಶವಾದ ಕಾರಣ ನೀರಿನ ಕೊರತೆ ಇತ್ತು. ಈ ವೇಳೆ ತಪ್ಪಿಗೆ ಕುಳಿತ್ತಿದ್ದ ಭಕ್ತ ತನ್ನ ಪಾದವನ್ನು ಭೂಮಿಗೆ ಸ್ಪರ್ಶಿಸಿದಾಗ ಚಿಲುಮೆ ಉಕ್ಕಿತು. ಈ ಪವಾಡವನ್ನು ಅರಿತ ಜನರು ಈ ಪ್ರದೇಶದಲ್ಲಿ ನೆಲೆ ನಿಂತರು.

ಇದೇ ಭಾಗದಲ್ಲಿ ಹಸುವೊಂದು ಪೊದೆಯೊಳಗೆ ನಿತ್ಯ ಹಾಲು ಕರೆದು ಬರುತ್ತಿತ್ತು. ಇದನ್ನು ಗಮನಿಸಿದ ಗ್ರಾಮಸ್ಥರು ಪೊದೆ ಪರಿಶೀಲಿಸಿದಾಗ ಅಲ್ಲಿ ಲಿಂಗ ಪತ್ತೆಯಾಯಿತು. ಇದನ್ನು ದೈವ ಸ್ವರೂಪವೆಂದೇ ಭಾವಿಸಿದ ಜನರು, ಸಮೀಪದಲ್ಲೇ ನೀರಿನ ಚಿಲುಮೆ ಇದ್ದ ಕಾರಣ ಜಲಕಂಠೇಶ್ವರಸ್ವಾಮಿ ಸನ್ನಿಧಿ ಎಂಬ ಅಂಕಿತವನ್ನಿಟ್ಟು ಪೂಜಿಸಲು ಪ್ರಾರಂಭಿಸಿದರು. ನೀರಿನ ಚಿಲುಮೆಯ ಸ್ಥಳ ದೇಗುಲದ ಸಮೀಪದಲ್ಲಿಯೇ ಇಂದು ಹಳ್ಳವಾಗಿದೆ.

ಕಟ್ಟಡ ನಿರ್ಮಾಣ: ಕಾಡು ಪ್ರದೇಶದಲ್ಲಿ ಪ್ರತ್ಯಕ್ಷವಾದ ಲಿಂಗಕ್ಕೆ (ಜಲಕಂಠೇಶ್ವರಸ್ವಾಮಿ) ಗ್ರಾಮಸ್ಥರು ಚಪ್ಪರ ನಿರ್ಮಿಸಿ ಪೂಜೆ ಸಲ್ಲಿಸಲು ಪ್ರಾರಂಭಿಸಿದರು. ಬಳಿಕ ಹೆಂಚಿನ ಮನೆಯನ್ನು ನಿರ್ಮಿಸಲಾಯಿತು. ಪಾಳೆಗಾರರ ಆಡಳಿತ ಅವಧಿಯಲ್ಲಿ ಅರ್ಚಕರ ದೈವ ಭಕ್ತಿಯನ್ನು ಪರೀಕ್ಷಿಸುವ ಸಲುವಾಗಿ ಬಂಡಳ್ಳಿ ದೊಡ್ಡ ಬೆಟ್ಟದ ಮೇಲೆ ಕೊಂಡವನ್ನು ಹಾಯಲು ಆಹ್ವಾನಿಸಿದರು. ಗಂಧ, ಧೂಪದ ಮರಗಳಿಂದ ಸುಮಾರು 3 ತಿಂಗಳು ಬೆಂದ ಕೊಂಡವನ್ನು ಹಾಯಲು ಈ ಭಾಗದ ಯಾವುದೇ ಅರ್ಚಕರು ಮುಂದಾಗಲಿಲ್ಲ. ಆದರೆ ಜಲಕಂಠೇಶ್ವರಸ್ವಾಮಿ ದೇಗುಲದ ಅರ್ಚಕರು ಕೊಂಡವನ್ನು ಹಾಯ್ದು ಎಲ್ಲರನ್ನೂ ಬೆರಗುಗೊಳಿಸಿದರಂತೆ. ಅರ್ಚಕರ ಇಚ್ಛೆಯಂತೆ ದೇಗುಲ ನಿರ್ಮಾಣಕ್ಕೆ ಪಾಳೆಗಾರರು ಬೆಂಬಲಿಸಿದರು. ಪುರಾತನ ದೇಗುಲ ಕಳೆದ ವರ್ಷ ಗ್ರಾಮಸ್ಥರು ಹಾಗೂ ದಾನಿಗಳ ಸಹಾಯದಿಂದ ಜೀರ್ಣೋದ್ಧಾರಗೊಂಡಿದೆ.

ಮೂರ್ತಿಗಳು:
ಈ ಭಾಗವು ಪಾಳೇಗಾರರ ಆಡಳಿತಕ್ಕೂ ಮೊದಲು ತಮಿಳುನಾಡಿನ ತಂಜಾವೂರಿನ ಚೋಳರ ಆಳ್ವಿಕೆಗೆ ಒಳಪಟ್ಟಿತ್ತು. ಚೋಳರು ವಿಜಯ ಸಾಧಿಸಿದ ಪ್ರದೇಶದಲ್ಲಿ ಹಲವು ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದರು. ಹಾಗಾಗಿ ಈ ಭಾಗದಲ್ಲಿ ದೊರೆತ ಮೂರ್ತಿಗಳನ್ನು ಗ್ರಾಮಸ್ಥರು ಜಲಕಂಠೇಶ್ವರ ದೇಗುಲದಲ್ಲೇ ತಂದು ಸಂರಕ್ಷಿಸಿದ್ದಾರೆ. ಅವುಗಳಿಗೂ ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ.

ಪ್ರತಿ ತಿಂಗಳು ಹುಣ್ಣಿಮೆ ಸೇವೆ
ಲಿಂಗವೇ ದೇಗುಲದಲ್ಲಿ ಪ್ರಧಾನವಾಗಿದ್ದು, ವೀರಭದ್ರೇಶ್ವರ ಸ್ವಾಮಿ, ವಿನಾಯಕ ಮೂರ್ತಿಗಳೂ ಇವೆ. ಲಿಂಗದ ಎದುರಿಗೆ ನಂದಿ ಇದೆ. ಗೋಪುರದಲ್ಲಿ ಮಹದೇಶ್ವರರ ಮೂರ್ತಿ ಒಳಗೊಂಡಂತೆ ವಿವಿಧ ದೇವರ ಕೆತ್ತನೆ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿ ಬಸವ ಮೂರ್ತಿ ಗಮನ ಸೆಳೆಯುತ್ತದೆ. ದೇಗುಲದಲ್ಲಿ ಪ್ರತಿನಿತ್ಯ ದ್ವಿಕಾಲ ಪೂಜೆ ಸಲ್ಲಿಸಲಾಗುತ್ತದೆ. ಹಬ್ಬ ಹರಿದಿನಗಳಂದು ಪಂಚಾಮೃತ ಅಭಿಷೇಕ ನೆರವೇರಿಸಿ ವಿಶೇಷ ಪೂಜೆಯನ್ನು ಸಮರ್ಪಿಸಲಾಗುತ್ತದೆ. ಯುಗಾದಿ ನಂತರದ 15ನೇ ದಿನಕ್ಕೆ ಕೊಂಡೋತ್ಸವ ನೆರವೇರಿಸಲಾಗುತ್ತದೆ. ಅಲ್ಲದೇ, ಪ್ರತಿ ಹುಣ್ಣಿಮೆಯಂದು ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದ ಮೇಲೆ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಈ ವೇಳೆ ಪ್ರತಿ ಕುಟುಂಬದವರೂ ಎಡೆಯನ್ನು ನೀಡುವುದು ವಾಡಿಕೆ.

ಮಾರಿಹಬ್ಬ ಸ್ಥಗಿತ
ಈ ಹಿಂದೆ ಗ್ರಾಮದಲ್ಲಿ 3 ದಿನ ಮಾರಿಹಬ್ಬ ಆಚರಿಸಲಾಗುತ್ತಿತ್ತು. ಈ ವೇಳೆ ಜಲಕಂಠೇಶ್ವರ ಸ್ವಾಮಿ ದೇಗುಲಕ್ಕೆ ಧಾನ್ಯಗಳಿಂದ ಬೆಳೆಸಿದ ಪೈರುಗಳ ಜಾಗರ, ತಂಪುಜ್ಯೋತಿಯನ್ನು ಸಮರ್ಪಿಸಲಾಗುತ್ತಿತ್ತು. ಜತೆಗೆ ವಿಶೇಷವಾಗಿ ಎಳವರ ಬಂಡಿ ಎನ್ನುವ ಎತ್ತಿನಗಾಡಿಯಲ್ಲಿ ಸೌದೆ ತುಂಬಿ ಸಿಂಗರಿಸುವ ಕಾರ್ಯಕ್ರಮ ಗ್ರಾಮಸ್ಥರಲ್ಲಿ ಉತ್ಸಾಹ ತುಂಬುತ್ತಿತ್ತು. ಕಾರಣಾಂತರದಿಂದ ಕಳೆದ 10 ವರ್ಷದಿಂದ ಮಾರಿಹಬ್ಬ ಸ್ಥಗಿತಗೊಂಡಿದೆ.

ತಲುಪುವುದು ಹೇಗೆ?
ತಾಲೂಕು ಕೇಂದ್ರದಿಂದ 18 ಕಿ.ಮೀ. ದೂರದಲ್ಲಿರುವ ಶಾಗ್ಯಕ್ಕೆ ಸಾಕಷ್ಟು ಖಾಸಗಿ ಮತ್ತು ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಿವೆ. ಶಾಗ್ಯದಲ್ಲಿ ಇಳಿದು ಬೀರೂಟ ಗ್ರಾಮಕ್ಕೆ ತೆರಳುವ ಹಾದಿಯಲ್ಲಿ ಅರ್ಧ ಕಿ.ಮೀ. ನಡೆದು ಸನ್ನಿಧಿಗೆ ತಲುಪಬೇಕು.

ಜಲಕಂಠೇಶ್ವರಸ್ವಾಮಿ ದೇಗುಲ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಹೆಚ್ಚಿನ ಸಂಖ್ಯೆಯ ಭಕ್ತರು ಸನ್ನಿಧಿ ನಂಬಿ ಬಂದು ಪೂಜೆ ಸಮರ್ಪಿಸುತ್ತಾರೆ. ಹಲವು ವರ್ಷಗಳಿಂದ ಅರ್ಚಕನಾಗಿ ಪೂಜೆ ಸಲ್ಲಿಸುತ್ತಿದ್ದೇನೆ. ಕಳೆದ ವರ್ಷ ದೇಗುಲವನ್ನು ಜೀರ್ಣೋದ್ಧಾರ ಮಾಡಲಾಗಿದೆ.-ಬಸಪ್ಪ ದೇವರು ಹಿರಿಯ ಅರ್ಚಕ