ಚಾಮರಾಜನಗರ: ಬಂಡಿಗೆರೆಯ ಶ್ರೀಕಾಳಮ್ಮ ಮತ್ತು ಶ್ರೀಕುಂಟಮ್ಮನವರ ಕೊಂಡೋತ್ಸವ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ತಾಲೂಕಿನ ಹರದನಹಳ್ಳಿ ಹೋಬಳಿ ಬಂಡಿಗೆರೆ ಗ್ರಾಮದಲ್ಲಿರುವ ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ಮುಂಭಾಗ ಸೋಮವಾರ ರಾತ್ರಿಯ ವೇಳೆಯಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದರ ಮೂಲಕ ಶ್ರೀಕಾಳಮ್ಮ ಮತ್ತು ಶ್ರೀಕುಂಟಮ್ಮನವರ ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು. ಬಳಿಕ ಮಂಗಳವಾರ ಮುಂಜಾನೆಯೇ ಸತ್ತಿಗೆ, ಸೂರಪಾನಿ, ಬಿರುದು, ಬಾವಲಿಗಳೊಂದಿಗೆ ಮೆರವಣಿಗೆ ಪ್ರಾರಂಭಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ನಗಾರಿ, ಬ್ಯಾಂಡುಸೆಟ್, ವೀರಗಾಸೆ, ದೊಣ್ಣೆ ವರಸೆ ಹಾಗೂ ಇನ್ನಿತರೆ ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ನಂತರ ಮೆರವಣಿಗೆ ದೇವಾಲಯದ ಆವರಣದಲ್ಲಿ ಅಂತ್ಯವಾಯಿತು. ದೇವಸ್ಥಾನದ ಮುಂಭಾಗ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಹತ್ತಾರು ಜನರು ಭಕ್ತರು ಶ್ರದ್ಧಾ-ಭಕ್ತಿಯಿಂದ ಕೊಂಡ ಹಾಯ್ದರು. ಈ ಕೊಂಡೋತ್ಸವದಲ್ಲಿ ತಾವರೆಕಟ್ಟೆ ಮೋಳೆ, ವೆಂಕಟಯ್ಯನ ಛತ್ರ, ದೊಡ್ಡ ಮೋಳೆ, ಬ್ಯಾಡಮೂಡ್ಲು ಹಾಗೂ ಇನ್ನಿತರೆ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗವಹಿಸಿದ್ದರು. ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸುವುದರ ಮೂಲಕ ಭಕ್ತಿ ಭಾವ ಮೆರೆದರು.
ಈ ಬಾರಿ ಕೊಂಡೋತ್ಸವದಲ್ಲಿ ವಿಶೇಷವಾಗಿ ಭಕ್ತಾಧಿಗಳು ಕೊಂಡೋತ್ಸವವನ್ನು ಯಾವುದೇ ನೂಕುನುಗ್ಗಲು ಇಲ್ಲದೇ ಕಣ್ತುಂಬಿಕೊಳ್ಳುವ ಸಲುವಾಗಿ 2 ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಈ ಮೂಲಕ ಭಕ್ತಾಧಿಗಳು ಕೊಂಡೋತ್ಸವವನ್ನು ಕಣ್ತುಂಬಿಕೊಂಡರು. ಶ್ರೀಕಾಳಮ್ಮ ಶ್ರೀಕುಂಟಮ್ಮನವರ ಕೊಂಡೋತ್ಸವದ ಅಂಗವಾಗಿ ಗ್ರಾಮದ ದೇವಸ್ಥಾನ ಹಾಗೂ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯ ದೀಪಾಲಂಕರವನ್ನು ಮಾಡಲಾಗಿತ್ತು. ಪ್ರಮುಖ ಬೀದಿಗಳನ್ನು ಮಾವಿನ ತೋರಣ ಮತ್ತು ಬಾಳೆಕಂದುಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಈ ಸಂದರ್ಭದಲ್ಲಿ ಬಂಡಿಗೆರೆ ಗ್ರಾಮದ ಯಜಮಾನರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.