ಚಾಮರಾಜನಗರ: ಚಿತ್ರಮಂದಿರಗಳು ಕೇವಲ ಚಿತ್ರ ಪ್ರದರ್ಶನದ ಕೇಂದ್ರವಾಗದೇ ನಮ್ಮ ನಾಡು-ನುಡಿ ಮತ್ತು ಸಂಸ್ಕೃತಿಯ ಭಾವನಾತ್ಮಕ ಬೆಸುಗೆಯಾಗಿತ್ತು. ಅಂತಹ ಚಿತ್ರಮಂದಿರಗಳು ಪ್ರಸ್ತುತ ಸಂದರ್ಭದಲ್ಲಿ ಪ್ರೇಕ್ಷಕರಿಲ್ಲದೇ ಮುಚ್ಚುವ ಆತಂಕದಲ್ಲಿದೆ.
ಜಿಲ್ಲೆಯ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಸದ್ಯಕ್ಕೆ ಸಿಂಹ ಮೂವಿ ಪ್ಯಾರಡೈಸ್, ಶ್ರೀಬಸವೇಶ್ವರ, ಶ್ರೀ ಭ್ರಮರಾಂಭ ಚಿತ್ರಮಂದಿರ, ಶ್ರೀ ಗುರುರಾಘವೇಂದ್ರ ಹಾಗೂ ಸಿದ್ಧಾರ್ಥ ಚಿತ್ರಮಂದಿರಗಳು ಕನ್ನಡ ಮತ್ತು ಇನ್ನಿತರೆ ಪರಭಾಷೆಯ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದೆ. ಆದರೆ ಇತ್ತೀಚೆಗೆ ಚಿತ್ರರಂಗದ ದೊಡ್ಡ ನಟರ ಸಿನಿಮಾಗಳು ಮತ್ತು ಉತ್ತಮ ಕಥಾ ಹಂದರವನ್ನು ಒಳಗೊಂಡಿರುವ ಸಿನಿಮಾಗಳು ತೆರೆಕಾಣದೇ ಚಿತ್ರಮಂದಿರಗಳು ಪ್ರೇಕ್ಷಕರಿಲ್ಲದೇ ಬಣಗುಡುತ್ತಿವೆ. ಜಿಲ್ಲೆಯ ಇತಿಹಾಸದಲ್ಲೇ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಈ ದಿನ ಪ್ರದರ್ಶನವಿಲ್ಲ ಎಂಬ ನಾಮಲಕಗಳು ಕಂಡುಬರುತ್ತಿದೆ. ಚಿತ್ರಮಂದಿಗಳ ಪುನಶ್ಚೇತನಕ್ಕಾಗಿ ಸಾಕಷ್ಟು ಪ್ರಯತ್ನ ಪಡುತ್ತಿರುವ ಮಾಲೀಕರು ಬಹುದೊಡ್ಡ ನಟರ ಹಳೆಯ ಸಿನಿಮಾಗಳನ್ನು ಮರುಪ್ರದರ್ಶನ ಮಾಡುತ್ತಿದ್ದಾರೆ.
ಆದರೆ ಚಿತ್ರಮಂದಿರಗಳತ್ತಾ ಪ್ರೇಕ್ಷಕರು ಸುಳಿಯುತ್ತಿಲ್ಲ ಎಂಬ ಆತಂಕವನ್ನು ಚಿತ್ರಮಂದಿರದ ಮಾಲೀಕರು ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚೆಗೆ ಸಿನಿಮಾ ನಿರ್ಮಾಪಕರು ಮತ್ತು ವಿತರಕರಿಂದ ಚಿತ್ರಮಂದಿರದ ಮಾಲೀಕರ ಮೇಲಾಗುವ ಶೋಷಣೆಗಳನ್ನು ಅನುಭವಿಸಲಾರದೇ, ಚಿತ್ರಮಂದಿರದ ಮಾಲೀಕರಲ್ಲಿ ಒಗ್ಗಟ್ಟು ಇಲ್ಲದೇ ಹಾಗೂ ಚಿತ್ರಮಂದಿರದಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಬಳ, ವಿದ್ಯುತ್ ಶುಲ್ಕ, ಆಸ್ತಿ ತೆರಿಗೆಯನ್ನು ಕಟ್ಟಲಾರದ ಪರಿಸ್ಥಿತಿಗೆ ತಲುಪಿರುವ ಮಾಲೀಕರು ಈಗಾಗಲೇ ಚಿತ್ರಮಂದಿರಗಳನ್ನು ಮುಚ್ಚುವ ಹಂತಕ್ಕೆ ತಲುಪಿದ್ದೇವೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕನ್ನಡ ಸಿನಿಮಾ ರಂಗಕ್ಕೆ ವರನಟ ಡಾ.ರಾಜ್‌ಕುಮಾರ್ ಹಾಗೂ ಇನ್ನಿತರೆ ಬಹುದೊಡ್ಡ ಕಲಾವಿದರನ್ನು ಕೊಡುಗೆಯಾಗಿ ನೀಡಿದ ಚಾಮರಾಜನಗರದಲ್ಲಿ ಇರುವ ಬೆರಳೆಣಿಕೆ ಚಿತ್ರಮಂದಿರಗಳು ಮುಂದಿನದಿನಗಳಲ್ಲಿ ಕಣ್ಮರೆಯಾಗಲಿವೆಯೇ ಎಂಬ ಆತಂಕದ ನುಡಿಗಳು ಚಿತ್ರಮಂದಿರದ ಮಾಲೀಕರಿಂದಲೇ ಕೇಳಿಬರುತ್ತಿದೆ.
ಸಮಸ್ಯೆ ಎದುರಿಸುತ್ತಿರುವ ಮಾಲೀಕರು:
ಈಗಾಗಲೇ ಹಲವಾರು ನಗರಗಳಲ್ಲಿ ಮಲ್ಟಿಪ್ಲೆಕ್ಸ್‌ಗಳ ಹಾವಳಿಯಿಂದ ಹತ್ತಾರು ಚಿತ್ರಮಂದಿರಗಳು ತನ್ನ ಪ್ರದರ್ಶನವನ್ನು ನಿಲ್ಲಿಸಿ ಇತಿಹಾಸದ ಪುಟ ಸೇರಿದೆ. ಕೋವಿಡ್ ಬಂದ ನಂತರದ ದಿನಗಳಿಂದ ಚಿತ್ರಮಂದಿರಗಳ ಮಾಲೀಕರು ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಚಿತ್ರಮಂದಿರದಲ್ಲಿ ಒಂದು ಪ್ರದರ್ಶನಕ್ಕೆ ಎಲ್ಲವನ್ನೂ ಒಳಗೊಂಡಂತೆ 4000 ರೂ. ನಿರ್ವಹಣಾ ವೆಚ್ಚ ತಗಲುತ್ತದೆ. ಆದರೆ ನಾಲ್ಕೂ ಪ್ರದರ್ಶನಗಳಿಂದಲೂ 4000 ರೂ. ಕಲೆಕ್ಷನ್ ಆಗುತ್ತಿಲ್ಲ ಎಂಬ ದುಸ್ಥಿತಿಗೆ ಚಿತ್ರಮಂದಿರಗಳು ತಲುಪಿದೆ. ಈ ನಡುವೆ ದುಬಾರಿಯಾಗಿರುವ ಆಸ್ತಿ ತೆರಿಗೆ, ವಿದ್ಯುತ್ ಶುಲ್ಕ ಹಾಗೂ ಕಾರ್ಮಿಕರಿಗೆ ನೀಡುವ ಸಂಬಳವನ್ನು ಹೊಂದಿಸಲು ಮಾಲೀಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಅತ್ಯಾಧುನಿಕ ರೀತಿಯಲ್ಲಿ ಚಿತ್ರಪ್ರದರ್ಶನ ಮಾಡುತ್ತಿದ್ದು, ಅದಕ್ಕೂ ಕೂಡ ಪ್ರದರ್ಶನ ವೆಚ್ಚ ದುಬಾರಿಯಾಗಿದೆ. ಈ ಎಲ್ಲದರ ನಡುವೆ ಸಿನಿಮಾ ಮಂದಿರಗಳನ್ನು ಉಳಿಸಿಕೊಳ್ಳುವುದು ಮಾಲೀಕರಿಗೆ ಬಹುದೊಡ್ಡ ಸವಾಲಾಗಿದೆ. ಈ ನಡುವೆ ಪ್ರಮುಖ ನಟರ ಚಿತ್ರಗಳು 2-3 ವರ್ಷಕ್ಕೆ ಒಮ್ಮೆ ತೆರೆಕಾಣುತ್ತಿರುವುದು ಕೂಡ ಜನರು ಚಿತ್ರಮಂದಿರಗತ್ತಾ ಬಾರದೇ ಇರುವುದಕ್ಕೆ ಪ್ರಮುಖ ಕಾರಣವಾಗಿದೆ. ಈಗಾಗಲೇ ಚಾಮರಾಜನಗರ, ಕೊಳ್ಳೇಗಾಲ, ಯಳಂದೂರು ಪಟ್ಟಣದಲ್ಲಿ ಹಲವಾರು ಚಿತ್ರಮಂದಿರಗಳು ಮುಚ್ಚಿದ್ದು, ಮುಂದಿನ ದಿನಮಾನಗಳಲ್ಲಿ ಉಳಿದಿರುವ ಬೆರಳೆಣಿಕೆ ಚಿತ್ರಮಂದಿರಗಳು ಬಾಗಿಲು ಹಾಕಿಕೊಳ್ಳುವ ಮಟ್ಟಕ್ಕೆ ಬಂದು ನಿಂತಿದೆ ಎಂದು ಹೇಳಲಾಗುತ್ತಿದೆ.
ನಾಯಕರನ್ನು ಹುಟ್ಟುಹಾಕಿದ ಚಿತ್ರಮಂದಿರಗಳು:
ಕನ್ನಡ ಚಿತ್ರರಂಗದಲ್ಲಿ ನಾವು ಕಾಣುತ್ತಿರುವ ಇತ್ತೀಚಿನ ನಾಯಕ ನಟರು, ಹೀರೋಗಳು ಎನಿಸಿಕೊಂಡಿದ್ದೆ ಏಕಪರಧೆಯ ಚಿತ್ರಮಂದಿರಗಳಲ್ಲಿ. ನಾಯಕರ ಬೃಹತ್ ಕಟೌಟ್ ಅಳವಡಿಸಿ, ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿ, ಚಿತ್ರಮಂದಿರದ ಒಳಗೆ ಶಿಳ್ಳೆ ಹೊಡೆದು ತಮ್ಮ ನಾಯಕರನ್ನು ಹುಟ್ಟುಹಾಕಿದ್ದು ಇದೇ ಏಕ ಪರದೆಯ ಚಿತ್ರಮಂದಿರಗಳು. ಈ ಸಂಭ್ರಮಗಳು ಕಂಡುಬರುವುದು ಕೂಡ ಇದೇ ಚಿತ್ರಮಂದಿರಗಳಲ್ಲಿ. ಮಲ್ಟಿಪ್ಲೆಕ್ಸ್‌ಗಳಲ್ಲಿ ಇಂತಹ ಅವಕಾಶ ಇರುವುದಿಲ್ಲ. ಇಂತಹ ಚಿತ್ರಮಂದಿರಗಳು ಮುಚ್ಚಿಕೊಂಡರೆ, ಮಾಲೀಕರು ಮಾತ್ರವಲ್ಲ ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ. ಸಿನಿಮಾ ರಸಿಕರು ಕೂಡ ಇಂತಹ ಖುಷಿಯಲ್ಲಿ ಸಿನಿಮಾಗಳನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ.
ಉಳಿಸಿಕೊಳ್ಳುವ ಪ್ರಯತ್ನವೇಗೆ?:
ಚಿತ್ರಮಂದಿರಗಳ ಮೇಲೆ ಇರುವ ಆಸ್ತಿ ತೆರಿಗೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದರಿಂದ ಹಾಗೂ ಸರ್ಕಾರ ವಿಶೇಷ ರಿಯಾಯಿತಿಯನ್ನು ನೀಡುವುದರ ಮೂಲಕ ಚಿತ್ರಮಂದಿರಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದಾಗಿದೆ. ಚಿತ್ರರಂಗದ ಪ್ರಮುಖ ನಾಯಕ ನಟರು ನಟಿಸಿದ 1-2 ಸಿನಿಮಾಗಳು ತೆರೆಕಾಣಬೇಕು. ಚಿತ್ರಮಂದಿರಗಳನ್ನು ಕೈಗಾರಿಕೆಗಳ ವ್ಯಾಪ್ತಿಗೆ ಒಳಪಡಿಸಬೇಕು. ವಿದ್ಯುತ್ ಶುಲ್ಕದಲ್ಲಿ ರಿಯಾಯಿತಿ ನೀಡಬೇಕು ಹಾಗೂ ಇನ್ನಿತರೆ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಿದಾಗ ಮಾತ್ರ ಈಗ ಉಳಿದಿರುವ ಬೆರಳೆಣಿಕೆಯ ಚಿತ್ರಮಂದಿರಗಳು ಉಳಿದುಕೊಳ್ಳುತ್ತವೆ. ಇಲ್ಲದಿದ್ದರೇ ಚಾಮರಾಜನಗರದಲ್ಲೂ ಚಿತ್ರಮಂದಿರಗಳು ಇತಿಹಾಸದ ಪುಟ ಸೇರುವುದು ದೂರ ಉಳಿದಿಲ್ಲ.
ಇತ್ತೀಚೆಗೆ ಚಿತ್ರಮಂದಿರದ ನಿರ್ವಹಣೆ ವೆಚ್ಚ ಭರಿಸುವುದು ಕಷ್ಟವಾಗುತ್ತಿದೆ. ತೆರಿಗೆ ಹೊರೆಯಿಂದಾಗಿ ಸಾಕಷ್ಟು ಸಮಸ್ಯೆಯಾಗುತ್ತಿದೆ. ಕಾರ್ಮಿಕರಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ಇದು ಈಗೆಯೇ ಮುಂದುವರಿದರೇ ಚಿತ್ರಮಂದಿರವನ್ನು ಮುಚ್ಚುವುದು ಬಿಟ್ಟು, ನಮಗೆ ಬೇರೆ ದಾರಿ ಉಳಿದಿಲ್ಲ.-ರೇವಂತ್ ದೇವರು, ಮಾಲೀಕರು, ಶ್ರೀಭ್ರಮರಾಂಭ ಚಿತ್ರಮಂದಿರ, ಚಾಮರಾಜನಗರ