ಚಾಮರಾಜನಗರ: ಜಿಲ್ಲಾ ಕೇಂದ್ರಕ್ಕೆ ಜೂ.24 ರಂದು ಭೇಟಿ ನೀಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರ ವಿರುದ್ಧ ರೈತ ಸಂಘದಿಂದ ಗೋಬ್ಯಾಕ್ ಚಳವಳಿ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ತಿಳಿಸಿದರು.
ಪಶುಸಂಗೋಪನಾ ಖಾತೆಯನ್ನು ವಹಿಸಿಕೊಂಡಿರುವ ಕೆ.ವೆಂಕಟೇಶ್ ಅವರು ಇಲಾಖೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ತಂದಿಲ್ಲ. ಕಳೆದ ಐದು ತಿಂಗಳಿಂದ ಜಿಲ್ಲೆಯಲ್ಲಿ ಬರಗಾಲ ಆವರಿಸಿದೆ. ಆದರೆ, ಒಂದು ದಿನವೂ ಸಚಿವರು ಇತ್ತ ಕಡೆ ತಲೆ ಹಾಕಲಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುವ ವೇಳೆ ಸಚಿವರ ವಿರುದ್ಧ ಕಪ್ಪುಪಟ್ಟಿ ಪ್ರದರ್ಶನ ಮಾಡಲಾಗುವುದು ಎಂದು ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಜಿಲ್ಲೆಯ ಹಲವು ಕಡೆಗಳಲ್ಲಿರುವ ಗೋಮಾಳಗಳನ್ನು ಸಚಿವರ ಹಿಂಬಾಲಕರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ಸರ್ವೇ ಮಾಡಿ ಒತ್ತುವರಿ ಸಾಬೀತಾಗಿದ್ದರು ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮವಹಿಸಿಲ್ಲ. ಗೋಮಾಳಗಳನ್ನು ಕ್ರಷರ್, ಕಮರ್ಷಿಯಲ್‌ಗೆ ಕೊಡಬಾರದೆಂಬ ಆದೇಶವಿದೆ. ಆದರೆ, ನಿಯಮವನ್ನು ಉಲ್ಲಂಘಿಸಿ ಅಧಿಕಾರಿಗಳು ಗೋಮಾಳಗಳನ್ನು ಕ್ರಷರ್‌ಗೆ ನೀಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಿರುವುದರಿಂದ ರೈತರು, ಜನಸಾಮಾನ್ಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೃಷಿ ಇಲಾಖೆಯಿಂದ ರೈತರಿಗೆ ವಿತರಣೆ ಮಾಡುವ ಬಿತ್ತನೆ ಬೀಜಗಳ ದರವನ್ನು ಕೂಡ ಏರಿಕೆ ಮಾಡಲಾಗಿದೆ. ಇದರಿಂದ ರೈತರಿಗೆ ಹೊರೆಯಾಗುತ್ತಿದ್ದು ಸರ್ಕಾರ ಹಾಗೂ ಸಂಬಂಧಪಟ್ಟವರು ಕ್ರಮವಹಿಸಬೇಕು. ನರೇಗಾದಡಿ ಜಿಲ್ಲೆಯಲ್ಲಿ ಸರಿಯಾಗಿ ಕೆಲಸ ನಡೆಯುತ್ತಿಲ್ಲ. ತಾಪಂ ಇಒ, ಪಿಡಿಒಗಳಿಗೆ ಹತ್ತಿರವಾದವರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ಕೆಲಸ ನಡೆಯದಿದ್ದರೂ ಬಿಲ್‌ಗಳನ್ನು ಮಾಡಿಕೊಡಲಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್, ಸಂಘಟನಾ ಕಾರ್ಯದರ್ಶಿ ವಿಜಯ್ ಕುಮಾರ್, ಉಪಾಧ್ಯಕ್ಷ ಪಾಳ್ಯ ಶಿವಮೂರ್ತಿ, ತಾಲೂಕು ಅಧ್ಯಕ್ಷ ಹೆಗ್ಗವಾಡಿಪುರ ಮಹದೇವಸ್ವಾಮಿ ಹಾಜರಿದ್ದರು.