ಜಿಲ್ಲೆ

ಕೆಲಸ ಕೊಟ್ರು, ಸಂಬಳ ಕೊಡ್ತಿಲ್ಲ!

ಕಿರಣ್ ಮಾದರಹಳ್ಳಿ

ಕಿರಣ್ ಮಾದರಹಳ್ಳಿ ಚಾಮರಾಜನಗರ
ಪ್ರತಿ ಉಸಿರಿನಲ್ಲೂ ತಮಗಾಗಿರುವ ಅನ್ಯಾಯದ ವಿರುದ್ಧ ನ್ಯಾಯವನ್ನು ನಿರೀಕ್ಷೆ ಮಾಡುತ್ತಿರುವ ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಮತ್ತೆ ಮತ್ತೆ ಉಸಿರುಗಟ್ಟುತ್ತಲೇ ಇದೆ. ಸದ್ಯಕ್ಕೆ ಕೆಲಸ ಮಾಡಿದರೂ ಸಂಬಳ ಸಿಗದೆ ಅನ್ಯಾಯವಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 32ಕ್ಕೂ ಹೆಚ್ಚು ಕೋವಿಡ್ ಸೋಂಕಿತರ ಸಾವಿಗೆ ಕಾರಣರಾದವರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಸೂಕ್ತ ಪರಿಹಾರ ದೊರಕಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಕೊಟ್ಟ ಭರವಸೆ ಈವರೆಗೂ ಈಡೇರಿಲ್ಲ, ತಾತ್ಕಾಲಿಕವಾಗಿ ಕೆಲವರಿಗೆ ನೀಡಿರುವ ಹೊರಗುತ್ತಿಗೆ ನೌಕರಿಗೆ ಸಂಬಳವನ್ನೂ ಕೊಟ್ಟಿಲ್ಲ.

ಮೂರು ತಿಂಗಳಾಯ್ತು:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುಂಡ್ಲುಪೇಟೆಯಲ್ಲಿ ಭಾರತ್ ಜೋಡೋ ಯಾತ್ರೆ ಮಾಡಿದ್ದಾಗ ಆಕ್ಸಿಜನ್ ದುರಂತದ ಸಂತ್ರಸ್ತರೊಂದಿಗೆ ಸಂವಾದ ಮಾಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ದೊರೆಯುವ ಭರವಸೆ ಸಿಕ್ಕಿತ್ತು. ಆದರೆ ಈವರೆಗೂ ಇದು ಈಡೇರಿಲ್ಲ. ಸಂತ್ರಸ್ತ ಕುಟುಂಬಸ್ಥರ ಒತ್ತಾಯ ಜೋರಾದ ಹಿನ್ನೆಲೆಯಲ್ಲಿ ಸರ್ಕಾರಿ ಉದ್ಯೋಗ ಕೊಡುವವರೆಗೂ ತಾತ್ಕಾಲಿಕವಾಗಿ ಉದ್ಯೋಗ ನೀಡುವುದಾಗಿ ಜಿಲ್ಲಾಡಳಿತ ತಿಳಿಸಿತ್ತು.
ಆದರೆ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗದ ಕಾರಣ, ತಾತ್ಕಾಲಿಕ ನೌಕರಿ ಬದಲು ಸರ್ಕಾರಿ ಉದ್ಯೋಗವನ್ನೇ ನೀಡಬೇಕೆಂಬ ಆಗ್ರಹದ ಹಿನ್ನೆಲೆಯಲ್ಲಿ ಹಲವರು ಇದನ್ನು ತಿರಸ್ಕರಿಸಿದರು. ಅನಿವಾರ್ಯತೆ ಇದ್ದ 14 ಜನರು ಸರ್ಕಾರಿ ಕಚೇರಿಯಗಳಲ್ಲಿ ‘ಡಿ’ ಗ್ರೂಪ್ ನೌಕರರಾಗಿ ಹೊರಗುತ್ತಿಗೆ ಆಧಾರದಲ್ಲಿ ೆಬ್ರವರಿಯಲ್ಲಿ ಕೆಲಸಕ್ಕೆ ಸೇರಿದರು. ಇವರಲ್ಲಿ ಕೆಲವರಿಗೆ ಮಾತ್ರ ಸಂಬಳ ಬಂದಿದೆ. ಆದರೆ ಹಲವರಿಗೆ ಮೊದಲ ತಿಂಗಳ (ೆಬ್ರವರಿ) ಸಂಬಳ ಸಿಕ್ಕಿದ್ದು ಬಿಟ್ಟರೆ ಮಾರ್ಚ್‌ನಿಂದ ಮೇವರೆಗೂ ವೇತನ ಬಂದಿಲ್ಲ. ಕೆಲಸ ಮಾತ್ರ ಮಾಡುತ್ತಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯ ದುಬಾರಿ ದುನಿಯಾದಲ್ಲಿ ಕೈತುಂಬಾ ಸಂಬಳ ತೆಗೆದುಕೊಳ್ಳುತ್ತಿರುವುವರೇ ಬದುಕುವುದಕ್ಕಾಗುತ್ತಿಲ್ಲ. ಇಂತಹದ್ದರಲ್ಲಿ ಆಕ್ಸಿಜನ್ ದುರಂತದಲ್ಲಿ ಮನೆಗೆ ಆಧಾರವಾಗಿದ್ದವರನ್ನು ಕಳೆದುಕೊಂಡು ದುಡಿಯಲು ಬಂದಿರುವವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರೆಲ್ಲ ಸಂಬಳವಿಲ್ಲದೆ ಜೀವನ ಮಾಡುವುದು ಹೇಗೆ ಎಂಬ ಸಂಕಷ್ಟ ಎದುರಾಗಿದೆ.

ಸದ್ಯದಲ್ಲೇ ಆಸ್ಪತ್ರೆಗೆ...
ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಡಿ ಗ್ರೂಪ್ ನೌಕರಿ ಮಾಡುತ್ತಿರುವ ಆಕ್ಸಿಜನ್ ದುರಂತದ ಸಂತ್ರಸ್ತರನ್ನು ಸಿಮ್ಸ್‌ಗೆ ವರ್ಗಾಯಿಸಲು ತಯಾರಿ ನಡೆದಿದೆ. ಆದರೆ ಕೆಲವರಿಗೆ ಆಸ್ಪತ್ರೆಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲ ಎಂದು ತಿಳಿದುಬಂದಿದೆ. ಈಗ ಕೆಲಸ ಮಾಡುತ್ತಿರುವ ಸರ್ಕಾರಿ ಕಚೇರಿಗಳಲ್ಲೇ ಕೆಲಸ ಮುಂದುವರಿಸಬೇಕೆಂಬ ಬಯಸುತ್ತಿದ್ದಾರೆ.

ಸರ್ಕಾರಿ ಉದ್ಯೋಗ ಯಾವಾಗ?
ಕಾಂಗ್ರೆಸ್ ನೀಡಿರುವ ಭರವಸೆಯಂತೆ ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ಸಿಗುವುದು ಯಾವಾಗ ಎಂದು ಕಾಯುವುದೇ ಒಂದು ಕೆಲಸವಾಗಿಬಿಟ್ಟಿದೆ. ಪಕ್ಷದ ನಾಯಕ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಸಿಕ್ಕ ಭರವಸೆಗಳು ಇನ್ನೂ ಭರವಸೆಯಾಗಿಯೇ ಉಳಿದಿವೆ. ಗ್ಯಾರಂಟಿ ಯೋಜನೆಗಳ ೋಷಣೆಗೂ ಮೊದಲೇ ಕಾಂಗ್ರೆಸ್ ಸರ್ಕಾರ ಆಕ್ಸಿಜನ್ ಸಂತ್ರಸ್ತರಿಗೆ ಭರವಸೆ ನೀಡಿತ್ತು. ಅದರಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಸಂತ್ರಸ್ತ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಲು ಈ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್‌ಗೆ ಸೂಚನೆ ನೀಡಿದ್ದರು. ಆದರೆ ಇನ್ನೂ ಸಂತ್ರಸ್ತರ ಕುಟುಂಬಕ್ಕೆ ಉದ್ಯೋಗ ಸಿಕ್ಕಿಲ್ಲ.

ಏನಾಗಿತ್ತು?
ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ದೇಶದಾದ್ಯಂತ ‘ಆಕ್ಸಿಜನ್ ದುರಂತ’ ಸದ್ದು ಮಾಡಿತ್ತು. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 2021ರ ಮೇ 2ರಂದು ರಾತ್ರಿ ಆಕ್ಸಿಜನ್ ಕೊರತೆ ಉಂಟಾಗಿ 32ಕ್ಕೂ ಹೆಚ್ಚು ಸೋಂಕಿತರು ಮೃತಪಟ್ಟರು. ಹೈಕೋರ್ಟ್‌ಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಮಿತಿ ಸಲ್ಲಿಸಿದ್ದ ವರದಿಯಲ್ಲಿ ಒಟ್ಟು ಸಾವಿನ ಸಂಖ್ಯೆ 24 ಎಂದು ನಮೂದಿಸಿತ್ತು. 13 ಮೃತ ಕುಟುಂಬದ ಸಂತ್ರಸ್ತರಿಗೆ ತಲಾ 5 ಲಕ್ಷ ರೂ., 11 ಸಂತ್ರಸ್ತರಿಗೆ ತಲಾ 2 ಲಕ್ಷ ರೂ. ತಾತ್ಕಾಲಿಕ ಪರಿಹಾರ ೋಷಣೆ ಮಾಡಿತ್ತು. ಸರ್ಕಾರ ಕೊಟ್ಟ ಸತ್ತವರ ಸಂಖ್ಯೆಯನ್ನು ಮೊದಲಿನಿಂದಲೂ ಅಲ್ಲಗಳೆಯುತ್ತಿದ್ದ ಕಾಂಗ್ರೆಸ್, ಮೃತರ ಸಂಖ್ಯೆಯನ್ನು 36 ಎಂದು ತಿಳಿಸಿತ್ತು. ಅಂತೆಯೇ ಪಕ್ಷದ ವತಿಯಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂತ್ರಸ್ತರ ಕುಟುಂಬಕ್ಕೆ ತಲಾ 1 ಲಕ್ಷ ರೂ. ನೀಡಿದ್ದರು. ಸಂತ್ರಸ್ತರ ಕುಟುಂಬಸ್ಥರು ಹೆಚ್ಚಿನ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ:
ಪ್ರಕರಣದ ತಪ್ಪಿತಸ್ಥರಿಗೆ ಇನ್ನೂ ಶಿಕ್ಷೆಯಾಗಿಲ್ಲ. ಘಟನೆ ನಡೆದಾಗ ಅಧಿಕಾರದಲ್ಲಿದ್ದ ಅಂದಿನ ಬಿಜೆಪಿ ಸರ್ಕಾರ ಕೆಎಸ್‌ಆರ್‌ಟಿಸಿ ಎಂಡಿಯಾಗಿದ್ದ ಶಿವಯೋಗ ಕಳಸದ ಅವರನ್ನು ತನಿಖೆಗಾಗಿ ನಿಯೋಜಿಸಿತ್ತು. ಕಾಂಗ್ರೆಸ್‌ನ ಆಕ್ಷೇಪದ ಬಳಿಕ ಬಿಜೆಪಿ ಸರ್ಕಾರ ನ್ಯಾಯಾಂಗ ತನಿಖೆ ನಡೆಸಲು ತೀರ್ಮಾನಿಸಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್ ನೇಮಿಸಿತ್ತು. ಈ ಮಧ್ಯೆ ಹೈಕೋರ್ಟ್ ನ್ಯಾಯಮೂರ್ತಿ ಎ.ಸ್.ಓಕ್ ಅವರು ಈ ಪ್ರಕರಣದ ಸತ್ಯಶೋಧನೆ ನಡೆಸಲು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ನೇತೃತ್ವದ ಸಮಿತಿಗೆ ನಿರ್ದೇಶನ ನೀಡಿದರು. ಹೀಗೆ ಪ್ರಾರಂಭದಲ್ಲಿ ಒಂದು ಪ್ರಕರಣ ಮೂರು ತಂಡಗಳಿಂದ ತನಿಖೆಗೊಳಪಟ್ಟಿತ್ತು. ಕೆಎಸ್‌ಆರ್‌ಟಿಸಿ ಎಂಡಿಯಾಗಿದ್ದ ಶಿವಯೋಗಿ ಕಳಸದ ಹಿಂದೆ ಸರಿದರು. ಹೈಕೋರ್ಟ್ ಸತ್ಯಶೋಧನೆ, ರಾಜ್ಯ ಸರ್ಕಾರ ನ್ಯಾಯಾಂಗ ತನಿಖೆ ಮುಂದುವರಿಯಿತು. ನಿವೃತ್ತ ನ್ಯಾಯಮೂರ್ತಿ ಎ.ಎನ್.ವೇಣುಗೋಪಾಲಗೌಡ ಸಮಿತಿ ಹೈಕೋರ್ಟ್‌ಗೆ ವರದಿ ಸಲ್ಲಿಸಿತು.

ಆಕ್ಸಿಜನ್ ದುರಂತದ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಿ ಕಣ್ಣೊರೆಸಲು ಗುತ್ತಿಗೆ ಆಧಾರದಲ್ಲಿ ಕೆಲಸ ಕೊಡಲಾಗಿದೆ. ಇವರಲ್ಲಿ ಹಲವರಿಗೆ ಸರಿಯಾಗಿ ಸಂಬಳ ಕೊಟ್ಟಿಲ್ಲ. ಇದರಿಂದ ಕುಟುಂಬಸ್ಥರ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದ್ದು, ಬೇಗ ವೇತನ ಮಾಡಿಕೊಡಬೇಕೆಂದು ಒತ್ತಾಯ ಮಾಡುತ್ತೇನೆ. ಎಸ್‌ಡಿಪಿಐ ಪಕ್ಷ ಸಂತ್ರಸ್ತರಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ.ಗಾಳೀಪುರ ಮಹೇಶ್, ನಗರಸಭೆ ಸದಸ್ಯ, ಚಾಮರಾಜನಗರ ಟೆಂಡರ್ ತೆಗೆದುಕೊಂಡಿರುವವರು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಂತ್ರಸ್ತರಿಗೆ ಸಂಬಳ ಹಾಕುತ್ತೇವೆಂದು ಹೇಳಿದ್ದರು. ಆದರೆ ಅವರು ಕರೆ ಸ್ವೀಕಾರ ಮಾಡುತ್ತಿಲ್ಲ. ಇವತ್ತು ಅಥವಾ ನಾಳೆಯೊಳಗೆ ಸಂಬಳ ಬರಬಹುದು.ಗೀತಾ ಹುಡೇದ, ಎಡಿಸಿ, ಚಾಮರಾಜನಗರ