ಚಾಮರಾಜನಗರ: ಭೋಗ ಮತ್ತು ರೋಗ ಜೀವನವನ್ನು ಮೆಟ್ಟಿ ನಿಲ್ಲುವ ಯೋಗದ ಮಹತ್ವದ ಅರಿತು ಕಿರಿಯರಿಂದ ಹಿಡಿದು ಹಿರಿಯವರೆಗೂ ಯೋಗಾಭ್ಯಾಸದಲ್ಲಿ ತೊಡಗುವಂತೆ ಮಾಡಿತು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಜಿಲ್ಲಾದ್ಯಂತ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಮುಂಜಾನೆ ಯೋಗಾಭ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಚಾಮರಾಜನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆ, ಯಳಂದೂರು ತಾಲೂಕಿನ ಗುಂಬಳ್ಳಿ ಸರ್ಕಾರಿ ಶಾಲೆ, ಹನೂರು ಮತ್ತು ಕೊಳ್ಳೇಗಾಲದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ಗುಂಡ್ಲುಪೇಟೆಯಲ್ಲಿ ಶ್ರೀಮದ್ದಾನೇಶ್ವರ ಮಹಾಮನೆ ಯೋಗ ಕೇಂದ್ರಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆ-ಕಾಲೇಜು ವಿದ್ಯಾರ್ಥಿಗಳು, ಪುರುಷರು, ಮಹಿಳೆಯರು ಭಾಗವಹಿಸಿ ಯೋಗಾಸನ ಮಾಡಿದರು. ಇವರಿಗೆ ಯೋಗ ಶಿಕ್ಷಕರು ಯೋಗದ ಮಹತ್ವ ತಿಳಿಸಿಕೊಟ್ಟರು. ಭೋಗ ಜೀವನ ಆರೋಗ್ಯದ ಮೇಲೆ ಬೀರುವ ಪರಿಣಾಮ, ಯೋಗ ಜೀವನ ಆರೋಗ್ಯ ವೃದ್ಧಿಸುವುದರಲ್ಲಿ ಬೀರುವ ಪ್ರಭಾವವನ್ನು ವಿವರಿಸಿದರು.
ಸೇವಾ ಭಾರತಿಯಲ್ಲಿ ಯೋಗಾಯೋಗ:
ಚಾಮರಾಜನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆ ಮತ್ತು ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ಶಾಲೆಯ ಆವರಣದಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಯೋಗ ಗುರು ಸತೀಶ್ ಉದ್ಘಾಟಿಸಿ ಮಾತನಾಡಿ, ಯೋಗ ಎಂದರೆ ಆಸನಾಭ್ಯಾಸ ಮಾತ್ರವಲ್ಲ. ಭಕ್ತಿ ಯೋಗ, ಜ್ಞಾನ ಯೋಗ, ಕರ್ಮ ಯೋಗ, ರಾಜ ಯೋಗ ಮಾರ್ಗಗಳು ನಮ್ಮನ್ನು ಉತ್ತಮಗೊಳಿಸುವುದರತ್ತ ಕೊಂಡೊಯ್ಯುತ್ತದೆ. ಅಡಿಪಾಯ ಬಿಗಿಯಾಗಿದ್ದರೆ ಕಟ್ಟಡ ಗಟ್ಟಿಯಾಗಿರುತ್ತದೆ. ಹಾಗಾಗಿ ಮಕ್ಕಳಲ್ಲಿ ಯೋಗದ ಮಹತ್ವ ತಿಳಿಸಿದ್ದರೆ ಆರೋಗ್ಯವಂತ ಮತ್ತು ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಪ್ರಾಣಾಯಾಮ ಮನಸ್ಸು ಚಂಚಲವಾಗುವುದನ್ನು ತಪ್ಪಿಸುತ್ತದೆ. ವಿದ್ಯಾರ್ಥಿಗಳು ಯೋಗದ ಬಗ್ಗೆ ಹೆಚ್ಚು ತಿಳಿದುಕೊಂಡು ಸಾಧನೆ ಮಾಡಿ ಎಂದು ಸಲಹೆ ನೀಡಿದರು. ಬಳಿಕ ಶಾಲೆಯ ಯೋಗ ಶಿಕ್ಷಕ ಅಜಿತ್ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ಮಾಡಿಸಿದರು. ಶಿಕ್ಷಕರು ತಿಳಿಸಿಕೊಟ್ಟ ಭಂಗಿಯನ್ನು ವಿದ್ಯಾರ್ಥಿಗಳು ಅನುಸರಿಸಿ ಯೋಗಾಸನ ಮಾಡಿ ಖುಷಿಪಟ್ಟರು. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಸ್.ರಮೇಶ್, ಚೂಡಾ ಮಾಜಿ ಅಧ್ಯಕ್ಷ ಎಸ್.ಬಾಲಸುಬ್ರಹ್ಮಣ್ಯಂ, ದೈಹಿಕ ಶಿಕ್ಷಣ ಶಿಕ್ಷಕ ಬಾಲು, ರವಿ, ಬಸವಣ್ಣ, ರಮೇಶ್ ಮತ್ತು ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಇದ್ದರು.
ವಿಶ್ವಕ್ಕೆ ಯೋಗವನ್ನು ಕೊಡುಗೆ ಕೊಟ್ಟಿರುವುದೇ ಭಾರತ. ರೋಗಮುಕ್ತರಾಗಲು ಯೋಗ ಮಾಡಬೇಕು. ಸದೃಢ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗಾಭ್ಯಾಸ ಮುಖ್ಯ. ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಮಾಡಿರುವುದು ಸಂತಸ ತಂದಿದೆ.ಅಜಿತ್, ಯೋಗ ಶಿಕ್ಷಕ, ಸೇವಾ ಭಾರತಿ ಶಿಕ್ಷಣ ಸಂಸ್ಥೆ, ಚಾಮರಾಜನಗರ